ವೈದ್ಯಕೀಯ ರಂಗದಲ್ಲಿ ವಿಶಿಷ್ಟ ಸಾಧನೆಗೈದ ಸಪ್ತಸಾಗರ ಗ್ರಾಮದ ಯುವಕ
ಬೆಳಗಾವಿ : ತಂದೆ ರೈತನಾಗಿ ಜಮೀನಿನಲ್ಲಿ ಉಳುಮೆ ಮಾಡುತ್ತಾ ಬದುಕು ಸಾಗಿಸುವುದರ ಜೊತೆಗೆ ಮಗನನ್ನು ವೈದ್ಯನಾಗಿ ಮಾಡುವ ಕನಸು ಕೊನೆಗೂ ನನಸಾಗಿದೆ. ತಂದೆಯ ಆಸೆಯಂತೆ ವೈದ್ಯಕೀಯ ಸ್ನಾತಕೋತ್ತರ ಪದವಿ ಪೂರೈಸಿ 260 ನೇ ರ್ಯಾಂಕ್ ನೊಂದಿಗೆ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಕೋರ್ಸ್ ಪಡೆದುಕೊಳ್ಳುವಲ್ಲಿ ಯುವಕ ಯಶಸ್ವಿಯಾಗಿದ್ದಾನೆ.
ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಶೀತಲ ಅಪ್ಪಾಸಾಹೇಬ್ ಹಳ್ಳೂರ ಸಧ್ಯ ವೈದ್ಯಕೀಯ ರಂಗವನ್ನು ಯಶಸ್ವಿಯಾಗಿ ಪೂರೈಸಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಎಂಬಿಬಿಎಸ್ ಪದವಿ ಪಡೆದು 7 ಚಿನ್ನದ ಪದಕದೊಂದಿಗೆ ತೇರ್ಗಡೆ ಹೊಂದಿದ್ದರು.
ಮಹಾರಾಷ್ಟ್ರದ (TNMC) ನಾಯರ್ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಸ್ನಾತಕೋತ್ತರ ಪದವಿಯೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಹುದ್ದೆಗಳಿಗೆ ನಡೆಸುವ NEET ಪರೀಕ್ಷೆಯಲ್ಲಿ ಅಖಿಲ ಭಾರತ ಶ್ರೇಣಿಯಲ್ಲಿ 260 ನೇ ರ್ಯಾಂಕ್ ಪಡೆಯುವ ಮೂಲಕ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ.
ರೈತ ಕುಟುಂಬದಲ್ಲಿ ಬೆಳೆದು ವಿಶಿಷ್ಟ ಸಾಧನೆಗೈದ ಯುವ ವೈದ್ಯ ಶೀತಲ ಅಪ್ಪಾಸಾಹೇಬ್ ಹಳ್ಳೂರ ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಯುವಕನ ಸಾಧನೆಗೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

