Select Page

Advertisement

ಆಧ್ಯಾತ್ಮಿಕತೆಯ ಮೇರು ಶಿಖರ ಸದ್ಗುರು ಅಲ್ಲಯ್ಯ ಸ್ವಾಮೀಜಿ : ಶಿವಪುತ್ರ ಮಠಪತಿ ಅಭಿಮತ

ಆಧ್ಯಾತ್ಮಿಕತೆಯ ಮೇರು ಶಿಖರ ಸದ್ಗುರು ಅಲ್ಲಯ್ಯ ಸ್ವಾಮೀಜಿ : ಶಿವಪುತ್ರ ಮಠಪತಿ ಅಭಿಮತ

ಚಿಕ್ಕೋಡಿ : ಹುಬ್ಬಳ್ಳಿ ಶಾಂತಾಶ್ರಮದ ಹಿರಿಯ ಪೂಜ್ಯ ಶ್ರೀ ಶಿವಪುತ್ರ ಶ್ರೀಗಳ ಆಶಿರ್ವಾದ ಪಡೆದ ಸದ್ಗುರು ಅಲ್ಲಯ್ಯ ಸ್ವಾಮೀಜಿಯವರು ಭಕ್ತಿ ಮಾರ್ಗದಲ್ಲಿ ನಡೆದು ಜನರ ಬಾಳಲ್ಲಿ ಜ್ಞಾನದ ದೀಪ ಬೆಳೆಗಿಸಿದವರು. ಇಂತಹ ಮಹಾನ್ ಶರಣರ ವಿಚಾರಧಾರೆ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸಿದ್ದಾಪುರವಾಡಿಯಲ್ಲಿರುವ ಶ್ರೀಮಠದ ಜೀರ್ಣೋದ್ಧಾರಕ್ಕೆ ನಿರ್ಧರಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ನಿವೃತ್ತ ಇಂಜಿನಿಯರ್ ಶಿವಪುತ್ರ ಮಠಪತಿ ಹೇಳಿದರು.‌

ತಾಲೂಕಿನ ಅಂಕಲಿ ಸಮೀಪದ ಸಿದ್ದಾಪುರವಾಡಿಯ ಸದ್ಗುರು ಅಲ್ಲಯ್ಯ ಸ್ವಾಮಿಗಳು ಹಾಗೂ ಚನ್ನಬಸಪ್ಪ ಶ್ರೀಗಳ ಮಠದ ಜೀರ್ಣೋದ್ಧಾರ ಹಿನ್ನಲೆಯಲ್ಲಿ ನಡೆದ ಪೂರ್ವಭಾವಿ ಸಭೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇವರು‌. ಚಿಕ್ಕೋಡಿ ಸೇರಿದಂತೆ ನಾಡಿನ ವಿವಿಧ ಭಾಗಗಳಿಗೆ ಸಂಚರಿಸಿ ಜನರಲ್ಲಿ ಭಕ್ತಿಯ ಬೀಜ ಬಿತ್ತುವ ಕೆಲಸವನ್ನು ಸದ್ಗುರು ಅಲ್ಲಯ್ಯ ಶ್ರೀಗಳು ದಶಕಗಳ ಹಿಂದೆಯೇ ಮಾಡಿದ್ದಾರೆ. ಇಂತಹ ಮಹಾನ್ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕಾಗಿದೆ ಎಂದರು.

ಸದ್ಗುರು ಅಲ್ಲಯ್ಯ ಶ್ರೀಗಳು ಹಾಕಿಕೊಟ್ಟ ಪರಂಪರೆಯನ್ನು ಇವರ ಹುಟ್ಟೂರಾದ ಅಥಣಿ ತಾಲೂಕಿನ ನದಿ ಇಂಗಳಗಾಂವಿಯವರು ಮುನ್ನಡೆಸಿಕೊಂಡು ಸಾಗುತ್ತಿದ್ದಾರೆ. ಕೆಲ ವರ್ಷಗಳಿಂದ ಭಕ್ತರು ಹಾಗೂ ಗುರುಗಳ ನಡುವೆ ಅಂತರ ಉಂಟಾಗಿತ್ತು‌. ಇವೆಲ್ಲವನ್ನೂ ಸರಿಪಡಿಸಿಕೊಂಡು ಪೂಜ್ಯರ ಮಠ ಜೀರ್ಣೋದ್ಧಾರ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಗ್ರಾಮದ ಮುಖಂಡರ ಮುಂದಾಳತ್ವದಲ್ಲಿ ಈ ಮಹತ್ವದ ಕಾರ್ಯ ನಡೆಸಲಾಗುವುದು ಎಂದರು.

ಪಾಲಭಾವಿಯ ವೇದಮೂರ್ತಿ ವೀರಯ್ಯ ಸ್ವಾಮಿಗಳು ಮಾತನಾಡಿ. ಮನುಷ್ಯನಾದವನು ಇಂದ್ರಿಯಗಳ ಮೇಲೆ ಹಿಡಿತ ಹೊಂದಿ ಆಧ್ಯಾತ್ಮಿಕ ಚಿಂತನೆಯ ಮೂಲಕ ಬದುಕು ಸಾಗಿಸಬೇಕು. ನಮ್ಮ ಮನಸ್ಸಿನ ಉದ್ವೇಗವ ತೊಡೆದು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಾಗಿದೆ. ಪೂಜ್ಯ ಅಲ್ಲಯ್ಯ ಸ್ವಾಮೀಜಿ ಹಾಗೂ ಚನ್ನಬಸಪ್ಪ ಶ್ರೀಗಳು ಮಹಾನ್ ಆಧ್ಯಾತ್ಮಿಕ ಚೇತನರು. ಅವರ ಹೆಸರಿನಲ್ಲಿ ಪ್ರತಿವರ್ಷವೂ ಆಧ್ಯಾತ್ಮಿಕ ಕಾರ್ಯಕ್ರಮ ಸಿದ್ದಾಪುರವಾಡಿ ಗ್ರಾಮದಲ್ಲಿ ಜರುಗಲಿ ಎಂದರು.

ಬಶೆಟ್ಟಪ್ಪ ಅಮರಶೆಟ್ಟಿ ಮಾತನಾಡಿ. ಪೂಜ್ಯ ಅಲ್ಲಯ್ಯ ಸ್ವಾಮೀಜಿ ಹಾಗೂ ಚನ್ನಬಸಪ್ಪ ಶ್ರೀಗಳು ಅಪಾರವಾದ ಆಧ್ಯಾತ್ಮಿಕ ಜ್ಞಾನ ಉಳ್ಳವರಾಗಿದ್ದರು. ಈ ಭಾಗದ ಜನರಲ್ಲಿ ಆಧ್ಯಾತ್ಮಿಕ ಬೀಜ ಬಿತ್ತುವಲ್ಲಿ ಇಬ್ಬರು ಪೂಜ್ಯರ ಪಾತ್ರ ಅಪಾರವಾಗಿದ್ದು, ಮಠದ ಜೀರ್ಣೋದ್ಧಾರಕ್ಕಾಗಿ ಕೈಗೊಂಡ ನಿರ್ಣಯ ಗುರುವಿನ ಆಶಿರ್ವಾದದಿಂದ ಸಕಾಲದಲ್ಲಿ ಮುಕ್ತಾಯವಾಗುವ ಭರವಸೆ ಇದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಸಂತೋಷ ಮಠದ, ಪ್ರಭಾಕರ ಭೂಮನಾಳ, ಶಿವಲಿಂಗ ಆಮ್ಟೆ, ಗುರುನಾಥ ರುಕಡೆ, ಶಿವಮೂರ್ತಯ್ಯ ಬಾಗೋಜಿಮಠ, ಸಿದ್ಧಾರೂಢ ಮಠಪತಿ, ರವಿಕುಮಾರ್ ಪಾಟೀಲ, ಓಂಕಾರ ಮಠಪತಿ, ಮುರುಘೇಶ ಮಠಪತಿ, ಮಹಾಂತೇಶ ಮಠಪತಿ, ಸಚಿನ್ ಅಮರಶೆಟ್ಟಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು. ‌

Advertisement

Leave a reply

Your email address will not be published. Required fields are marked *

error: Content is protected !!