
ಮಳೆ ಅವಾಂತರ ; ಬೆಳಗಾವಿ ಜಿಲ್ಲೆಯ ಕೆಲ ತಾಲೂಕಿನ ಶಾಲೆ – ಕಾಲೇಜುಗಳಿಗೆ ರಜೆ

ಬೆಳಗಾವಿ ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಜೂನ್ 26 ರಂದು ಬೆಳಗಾವಿ, ಖಾನಾಪುರ ಹಾಗೂ ಕಿತ್ತೂರು ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ.
ಬೆಳಗಾವಿ ನಗರ ಸೇರಿದಂತೆ ಕೆಲ ತಾಲೂಕುಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕೋಡಿ-ನಿಪ್ಪಾಣಿ ತಾಲೂಕಿನ ನದಿಗಳಲ್ಲಿ 3 ಅಡಿಯಷ್ಟು ನೀರು ಏರಿಕೆಯಾಗಿದೆ.
ಬಾರವಾಡ – ಕುನ್ನುರ ಮತ್ತು ಭೋಜ – ಶಿವಾಪುರವಾಡಿ, ಕಾರದಗಾ – ಭೋಜ ಮತ್ತು ಮಲಿಕವಾಡ – ದತವಾಡ, ಕಲ್ಲೋಳ – ಯಡೂರ ಸೇರಿದಂತೆ ಒಟ್ಟು 8 ಕೆಳಹಂತದ ಸೇತುವೆಗಳು ಜಲಾವೃತಗೊಂಡಿವೆ.
ರಾಜಾಪುರ ಬ್ಯಾರೇಜ್ ನಿಂದ 73 ಸಾವಿರ ಕ್ಯೂಸೆಕ್ ಹೊರ ಹರಿವು ಇದ್ದು ಒಟ್ಟು 92,050 ಕ್ಯೂಸೆಕ್ ನೀರು ಕೃಷ್ಣಾ ಉಪ ನದಿಗಳ ಮೂಲಕ ಹರಿದು ಬರುತ್ತಿದೆ. ಪರಿಣಾಮ ಕೃಷ್ಣಾ,ವೇದಗಂಗಾ, ದೂಧಗಂಗಾ ನದಿಗಳಿಗೆ ಇವತ್ತು 3 ಅಡಿಯಷ್ಟು ನೀರು ಏರಿಕೆಯಾಗಿದೆ. ಕಲ್ಲೋಳ ಗ್ರಾಮದ ದತ್ತ ಮಂದಿರದ ಕೆಳಭಾಗದಲ್ಲಿ ಕೃಷ್ಣಾ ನದಿಯ ನೀರು ಪ್ರವೇಶಿಸಿದೆ.