ಶ್ರೀ ಶಿವಬಸವ ಗುರುಮಂದಿರ ಲೋಕಾರ್ಪಣೆ ಕಾರ್ಯಕ್ರಮ ; ಗುರುವಾರ ಅಥಣಿಯಿಂದ ಸಪ್ತಸಾಗರ ವರೆಗೆ ಜ್ಯೋತಿ ಯಾತ್ರೆ
ಅಥಣಿ : ಶಿವಬಸವ ಗುರುಮಂದಿರ ಲೋಕಾರ್ಪಣೆ ; ಗುರುವಾರ ಅಥಣಿಯಿಂದ ಸಪ್ತಸಾಗರ ವರೆಗೆ ಜ್ಯೋತಿ ಯಾತ್ರೆ ಸಪ್ತಸಾಗರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ “ ಶ್ರೀ ಶಿವಬಸವ ಗುರುಮಂದಿರ ” ಲೋಕಾರ್ಪಣೆ ಕಾರ್ಯಕ್ರಮ ಅಂಗವಾಗಿ ಗುರುವಾರ ಮಧ್ಯಾಹ್ನ ಅಥಣಿ ಪಟ್ಟಣದಿಂದ ಸಪ್ತಸಾಗರ ಗ್ರಾಮದವರೆಗೆ ಜ್ಯೋತಿಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 1 ರ ಗುರುವಾರ ಹಾವೇರಿಯ ಹುಕ್ಕೇರಿ ಮಠದಿಂದ ಬರುವ ಶ್ರೀ ಶಿವಬಸವ ಜ್ಯೋತಿಯನ್ನು ಅಥಣಿ ಪಟ್ಟಣಕ್ಕೆ ಬರಮಾಡಿಕೊಂಡು ನಂತರ ಸಿದ್ದೇಶ್ವರ ದೇವಸ್ಥಾನದಿಂದ ಬೈಕ್ ರ್ಯಾಲಿ ಮೂಲಕ ಸಪ್ತಸಾಗರ ಗ್ರಾಮದ ವರೆಗೆ ಜ್ಯೋತಿ ಯಾತ್ರೆ ನೆರವೇರಲಿದೆ. ಸಂಜೆ 7 ಗಂಟೆಗೆ ಪೂಜ್ಯರಿಂದ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ.
ಹಾವೇರಿಯ ಹುಕ್ಕೇರಿಮಠದ ಶ್ರೀ ಶಿವಬಸವ ಶಿವಯೋಗಿಗಳ ಜನ್ಮಸ್ಥಳ ಸಪ್ತಸಾಗರ ಗ್ರಾಮದಲ್ಲಿ ಮೇ. 1 ರಿಂದ 5 ರ ವರೆಗೆ ಐದು ದಿನ ಶ್ರೀ ಶಿವಬಸವ ಗುರುಮಂದಿರ ಲೋಕಾರ್ಪಣೆ ಹಿನ್ನಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರವಚನ, ಜ್ಯೋತಿ ರತಯಾತ್ರೆ, ಸಾವಯವ ಕೃಷಿ ಚಿಂತನ, ಬೈಕ್ ರ್ಯಾಲಿ, ಮಹಿಳಾ ಸಮಾವೇಶ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಮೇ. 5 ರಂದು ನೂತನವಾಗಿ ನಿರ್ಮಾಣಗೊಂಡ ಶ್ರೀ ಶಿವಬಸವ ಗುರುಮಂದಿರದಲ್ಲಿ ಕಳಸಾರೋಹಣ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಶ್ರೀಗಳ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮ ಜರುಗಲಿವೆ ಎಂದು ಡಾ. ಮಹಾಂತಪ್ರಭು ಸ್ವಾಮೀಜಿ ತಿಳಿಸಿದರು.


