ಬೆಳಗಾವಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ; ಸಾವಿಗೆ ಕಾರಣವಾಯ್ತ ಫೋನ್ ಕಾಲ್…?
ಬೆಳಗಾವಿ : ಬೆಳಗಾವಿಯಲ್ಲಿ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅನ್ಯಕೋಮಿನ ವ್ಯಕ್ತಿಯೊಬ್ಬ ಕಾಲ್ ಮಾಡಿ ಕಿರುಕುಳ ಕೊಟ್ಟ ಹಿನ್ನೆಲೆ ಯುವತಿ ನೇಣಿಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಚಿಕ್ಕಮಲ್ಲೂರು ಗ್ರಾಮದ ಯುವತಿ ಶಿಲ್ಪಾ (22) ಆತ್ಮಹತ್ಯೆಗೆ ಶರಣಾಗಿದ್ದವಳು. ಬೆಳಗಾವಿಯಲ್ಲಿ ಬಿಸಿಎ ವಿಧ್ಯಾಭ್ಯಾಸ ಮಾಡುತ್ತಿದ್ದ ತಾನಿದ್ದ ಹಾಸ್ಟೆಲ್‌ನಲ್ಲಿಯೇ ನೇಣಿಗೆ ಶರಣಾಗಿದ್ದಳು.
ಪ್ರಾರಂಭದಲ್ಲಿ ಶಿಲ್ಲಾ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿರಲಿಲ್ಲ. ಆದರೆ ಅನ್ಯ ಕೋಮಿನ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಈಗ ಬಯಲಾಗಿದೆ.
ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ಶಿಗ್ಗಾಂವಿ ತಾಲೂಕಿನ ಶಿಲ್ಪಾ ಹಾಗೂ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಇಬ್ಬರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಏ. 12ರಂದು ಬೆಳಗಾವಿಯ ಹಾಸ್ಟೆಲ್ ಒಂದರಲ್ಲಿ ಶಿಲ್ಪಾ ಆತ್ಮಹತ್ಯೆಗೆ ಶರಣಾಗಿದ್ದಳು. ಇದಕ್ಕೆ ಫರ್ನಿಚರ್ ಅಂಗಡಿ ಮಾಲೀಕ ರಂಜಾನ್ ನದಾಫ್‌ನ ಕಿರುಕುಳವೇ ಕಾರಣ ಎಂದು ನವೀನ್ ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನವೀನ್ ಮೇಲೆ ಫರ್ನಿಚರ್ ಅಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪ ಕೇಳಿ ಬಂದಿತ್ತು. ಇದರಿಂದ ಅಂಗಡಿ ಮಾಲೀಕ ರಂಜಾನ್ ನದಾಫ್ ನವೀನ್ ಮೇಲೆ ಸಿಟ್ಟಾಗಿದ್ದ. ಈ ವೇಳೆ ನವೀನ್ ಮೊಬೈಲ್ ಕಸಿದುಕೊಂಡಿದ್ದ ರಂಜಾನ್, ನವೀನ್ ಹಾಗೂ ಶಿಲ್ಪಾ ನಡುವೆ ಚಾಟಿಂಗ್ ನಡೆದಿರುವುನ್ನು ನೋಡಿದ್ದ.
ನವೀನ್ ಮೊಬೈಲ್‌ನಲ್ಲಿದ್ದ ಶಿಲ್ಪಾಳ ನಂಬರ್ ತೆಗೆದುಕೊಂಡು ಅವಳಿಗೆ ಕರೆ ಮಾಡಿ, ನವೀನ್ ನಿನಗೆ ದುಡ್ಡು ಕಳಿಸಿದ್ದಾನೆ, ನಿಮಗೆ ದುಡ್ಡು ಎಲ್ಲಿಂದ ಬಂತು? ನಮ್ಮ ಫರ್ನಿಚರ್ ಅಂಗಡಿಯಲ್ಲಿ ಕಳ್ಳತನ ಮಾಡಿ ನವೀನ್ ನಿನಗೆ ಹಣ ಕಳಿಸಿದ್ದಾನೆ. ಇದನ್ನು ಬಹಿರಂಗ ಮಾಡುತ್ತೇನೆ.
ನಿಮ್ಮ ತಂದೆ ತಾಯಿಗೂ ಹೇಳುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದ. ಇದರಿಂದ ಬೇಸತ್ತು ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಸ್ನೇಹಿತ ನವೀನ್ ಆರೋಪಿಸಿದ್ದಾನೆ


