ಬೆಳಗಾವಿ : ಅಡ್ಡಾದಿಡ್ಡಿ ಲಾರಿ ಓಡಿಸಿದ್ದಕ್ಕೆ ಚಾಲಕನ ಹತ್ಯೆ ; ಆರೋಪಿಗಳು ಅಂದರ್
ಬೆಳಗಾವಿ : ಅಡ್ಡಾದಿಡ್ಡಿಯಾಗಿ ಲಾರಿ ಓಡಿಸಿಕೊಂಡು ಹೊರಟಿದ್ದ ಚಾಲಕನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕೋಳಿ ಗ್ರಾಮದ ಬಳಿ ನಡೆದಿದೆ.
ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಅಜೀಮ್ ಇಪ್ಪೇರಿ (23) ಮೃತ ಲಾರಿ ಚಾಲಕ. ಸಂಕೇಶ್ವರದಿಂದ ಬೆಳಗಾವಿ ಕಡೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದ ಅಜೀಮ್ ಚಾಲನೆ ವೇಳೆ ಬೈಕ್, ಕ್ಯಾಂಟರ್ಗೆ ಗುದ್ದಿ ಗಾಬರಿಯಿಂದ ಹೊರಟಿದ್ದ. ಈ ವೇಳೆ ಪರಸಪ್ಪ ನಾಯಿಕ್ಗೆ ಸೇರಿದ ಬೈಕ್, ಹಣಮಂತ ಇಡ್ಲಿಗೆ ಸೇರಿದ ಕ್ಯಾಂಟರ್ಗೆ ಗುದ್ದಿದ್ದ.
ಎರಡು ಕಡೆ ಅಪಘಾತ ಎಸಗಿದರೂ ಲಾರಿ ನಿಲ್ಲಿಸದೇ ಪಾರಾರಿಯಾಗಲು ಅಜೀಂ ಯತ್ನಿಸಿದ್ದ. ಈ ವೇಳೆ ಬೆನ್ನತ್ತಿ ಕಾಟಬಳಿ ಗ್ರಾಮದ ಹತ್ತಿರ ಲಾರಿಗೆ ಕಲ್ಲೆಸೆದು ಪರಸಪ್ಪ ಹಾಗೂ ಹಣಮಂತ ತಡೆದಿದ್ದರು.ಈ ವೇಳೆ ಪರಸಪ್ಪ ತನ್ನ ಐವರು ಸ್ನೇಹಿತರ ಜೊತೆಗೂಡಿ ಅಜೀಂ ಜೊತೆಗೆ ವಾಗ್ವಾದ ನಡೆದಿತ್ತು.
ಇದು ವಿಕೋಪಕ್ಕೆ ತಿರುಗಿ ಅಜೀಂ ಮರ್ಮಾಂಗಕ್ಕೆ ಒದ್ದು, ಐವರಿಂದಲೂ ಬಡಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಪರಸಪ್ಪ, ಹಣಮಂತಗೆ ಹಾಳಪ್ಪ ಹಳ್ಯಾಗೋಳ, ಈರಪ್ಪ ನಾಯಿಕ್, ಅಮಿತ್ ಶಿಂಧೆ ಸಾಥ್ ನೀಡಿದ್ದರು.
ತೀವ್ರ ಅಸ್ವಸ್ಥಗೊಂಡಿದ್ದ ಅಜೀಂಗೆ ಬೆಳಗಾವಿಯ ಬೀಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ಲಾರಿ ಚಾಲಕ ಅಜೀಂ ಇಪ್ಪೇರಿ ಮೃತ ಪಟ್ಟಿದ್ದಾನೆ.
ಲಾರಿ ಚಾಲಕನ ಹತ್ಯೆಗೆ ಕಾರಣರಾದ ಐವರೂ ಆರೋಪಿಗಳನ್ನ ಯಮಕನಮರಡಿ ಪೊಲೀಸರು ಬಂಧಿಸಿ ಬೆಳಗಾವಿ ಹಿಂಡಲಗಾ ಜೈಲಿಗೆ ರವಾನೆ ಮಾಡಿದ್ದಾರೆ.


