ಭಾರತದ ಸಾಧನೆ ಹೆಮ್ಮೆಯಿಂದ ಹೇಳುವ ದಿನ ಇವತ್ತು :ಪ್ರೊ. ವಿದ್ಯಾಶಂಕರ್ ಎಸ್.
ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಜ್ಞಾನ ಸಂಗಮದಲ್ಲಿ ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ಅನೇಕರ ತ್ಯಾಗ ಬಲಿದಾನದ ಪ್ರತೀಕವಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ.
ಬ್ರಿಟಿಷರ ಗುಲಾಮಗಿರಿಯಲ್ಲಿ ನರಳಿದ್ದ ಪ್ರಜೆಗಳಿಗೆ ಸಂವಿಧಾನಾತ್ಮಕ ಹಕ್ಕುಗಳನ್ನು ನೀಡಿದ ಶ್ರೇಷ್ಠ ದಿನ ಇವತ್ತು. ಕಳೆದ 78ವರ್ಷಗಳಲ್ಲಿ ನಮ್ಮ ಭಾರತದ ಸಾಧನೆಯನ್ನ ನೆನೆಯುವಂತಹ ಹಾಗೂ ಜಗತ್ತಿಗೆ ಸಾರಿ ಹೇಳುವ ದಿನ ಇವತ್ತು. ಪ್ರಸಕ್ತ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿದ್ದು ಗ್ಲೊಬಲ್ ಇನ್ನೊವೆಶನ್ ಇಂಡೆಕ್ಸ್ ನಲ್ಲಿ 41 ಸ್ಥಾನಕ್ಕೆರಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಇರುವ ನಾವು ವಿದ್ಯಾರ್ಥಿಗಳಿಗೆ ಗುಣಾತ್ಮಕ ಮತ್ತು ಕೌಶಲ್ಯವುಳ್ಳ ಶಿಕ್ಷಣವನ್ನು ಕೊಡಬೇಕು. ಜಾಗತಿಕ ಬದಲಾವಣೆ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಕ್ಷೀಪ್ರಗತಿಯಲ್ಲಿ ಬದಲಾವಣೆ ಆಗುತ್ತಿರುವ ಪರಿಸ್ಥಿತಿಯಲ್ಲಿ ಅವಶ್ಯಕತೆಗೆ ತಕ್ಕಂತೆ ನಾವು ಬದಲಾವಣೆಗೆ
ಒಗ್ಗಿಕೊಂಡು ರಾಷ್ಪ್ರದ ಅಭಿವೃದ್ಧಿಯಲ್ಲಿ ಪ್ರಮುಖ ಅಂಗಗಳಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರಾಮಚಂದ್ರ ದಿಕ್ಷಿತ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕುಲಸಚಿವರಾದ ಪ್ರೊ. ಬಿ. ಇ. ರಂಗಸ್ವಾಮಿ ಹಣಕಾಸು ಅಧಿಕಾರಿ ಪ್ರಶಾಂತ ನಾಯಕ ಜಿ, ಸ್ಥಾನಿಕ ಅಭಿಯಂತರ ವೈ ಎಸ್ ದಿಕ್ಷಿತ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪಿ ವಿ ಕಡಗದಕೈ, ವಿಶೇಷಾಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.

