ಡಿಸಿಪಿ ಪಿ.ವಿ ಸ್ನೇಹಾ ವರ್ಗಾವಣೆ ; ವಿಶೇಷ ಕಾರ್ಯಕ್ರಮಗಳ ಮೂಲಕ ಜನಮನಗೆದ್ದ ಖಡಕ್ ಅಧಿಕಾರಿ
ಬೆಳಗಾವಿ : ಶಾಲಾ, ಕಾಲೇಜು ಮಕ್ಕಳಿಗೆ ಕಾನೂನು ಅರಿವು ಹಾಗೂ ಬದುಕಿನ ಮೌಲ್ಯಗಳನ್ನು ವಿಶೇಷ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಪಡೆದಿದ್ದ ಬೆಳಗಾವಿ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಪಿ.ವಿ ಸ್ನೇಹಾ ವರ್ಗಾವಣೆಯಾಗಿದ್ದಾರೆ.
ತಮ್ಮ ಅಧಿಕಾರ ಅವಧಿಯಲ್ಲಿ ನಗರದ ಅನೇಕ ಶಾಲಾ ಕಾಲೇಜುಗಳಿಗೆ ಭೇಟಿ ನೀಡುತ್ತಿದ್ದ ಇವರು, ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕಿಯಂತೆ ಬದುಕಿನ ಮೌಲ್ಯ ಕಟ್ಟಿಕೊಡುವ ಅದ್ಬುತ ಕೆಲಸ ಮಾಡಿದವರು ಡಿಸಿಪಿ ಸ್ನೇಹಾ. ಕಾಲೇಜು ವಿದ್ಯಾರ್ಥಿಗಳಲ್ಲಿ
ಸಂಚಾರಿ ನಿಯಮ ಪಾಲನೆ ಕುರಿತು ಜಾಗೃತಿ, ಮಾದಕ ವ್ಯಸನದಿಂದ ದೂರ ಇದ್ದು ಉತ್ತಮ ಶಿಕ್ಷಣ ಪಡೆದು ಸುಂದರ ಬದುಕು ಕಟ್ಟಿಕೊಳ್ಳುವ ಮಾರ್ಗದರ್ಶನ ಮಾಡಿದ ಇವರ ಕಾರ್ಯಕ್ಕೆ ಪೋಷಕರು ಯಾವತ್ತೂ ಕೃತಜ್ಞರಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಬೆಳಗಾವಿ ನಗರ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿಯಾಗಿ ಸೇವೆ ಸಲ್ಲಿಸಿರುವ ಪಿ.ವಿ ಸ್ನೇಹಾ ಅವರು ನಗರದ ಅಪರಾಧ ಕೃತ್ಯ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಷ್ಟೇ ಅಲ್ಲದೇ ಸಂಚಾರಿ ನಿಯಮ ಪಾಲನೆ ಆಗದೆ ಜನರಿಗೆ ತೊಂದರೆಯಾಗುತ್ತಿದ್ದಂತೆ ತ್ವರಿತವಾಗಿ ಸ್ಪಂದಿಸಿದ್ದು ಇವರ ಹೆಗ್ಗಳಿಕೆ.
ಒಟ್ಟಿನಲ್ಲಿ ಬೆಳಗಾವಿ ನಗರದ ಜನರ ಸೇವೆಗಾಗಿ ನಿರಂತರ ಕಾರ್ಯ ನಿರ್ವಹಿಸುವ ಮೂಲಕ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಸಲ್ಲಿಸಿರುವ ಇವರ ಸೇವೆಯನ್ನು ಜನ ಯಾವತ್ತೂ ಮರೆಯಲು ಸಾಧ್ಯವಿಲ್ಲ.
ಸಧ್ಯ ಡಿಸಿಪಿ ಸ್ನೇಹ ಅವರಿಂದ ತೆರವಾದ ಸ್ಥಾನಕ್ಕೆ ನಿರಂಜನ್ ರಾಜೆ ಅರಸ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ ಪಿ.ವಿ ಸ್ನೇಹಾ ಅಧಿಕಾರ ಸ್ವೀಕರಿಸಲಿದ್ದಾರೆ.


