Select Page

ಬೆಳಗಾವಿಗೆ ಬರ್ತಾರಾ ಬರಾಕ್ ಒಬಾಮಾ ; ಸಚಿವರು ಹೇಳಿದ್ದೇನು…?

ಬೆಳಗಾವಿಗೆ ಬರ್ತಾರಾ ಬರಾಕ್ ಒಬಾಮಾ ; ಸಚಿವರು ಹೇಳಿದ್ದೇನು…?

ಬೆಳಗಾವಿ : ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ 39 ನೇ ಅಧಿವೇಶನ 1924 ರ ಡಿಸೆಂಬರ್ 26 ಹಾಗೂ 27 ರಂದು ಬೆಳಗಾವಿಯಲ್ಲಿ ನಡೆದು 100 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಬರುವ ಡಿಸೆಂಬರ್ ನಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಲು ಸರ್ಕಾರ ಮುಂದಾಗಿದ್ದು ಈಗಾಗಲೇ ತಯಾರಿ ನಡೆಯುತ್ತಿವೆ.‌

1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಇಷ್ಟೊಂದು ಪ್ರಾಮುಖ್ಯತೆ ಪಡೆಯಲು ಪ್ರಮುಖ ಕಾರಣ ಮಹಾತ್ಮ ಗಾಂಧಿಜಿಯವರು ಅಧಿವೇಶನದ ಅಧ್ಯಕ್ಷರಾಗಿದ್ದರು. ಹಾಗೆಯೇ ಗಾಂಧಿ ಅಧ್ಯಕ್ಷರಾಗಿದ್ದ ಇದೇ ಮೊದಲು ಹಾಗೂ ಕೊನೆಯ ಅಧಿವೇಶನ ಎಂಬುದು ಮತ್ತೊಂದು ವಿಶೇಷ. ಇದೇ ಕಾರಣಕ್ಕೆ ಈ ಬಾರಿ ಬೆಳಗಾವಿಯಲ್ಲಿ ಗಾಂಧಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಅಧಿವೇಶನದ ನೂರನೇ ವರ್ಷದ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ.

ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಸಮಾರಂಭ ಡಿಸೆಂಬರ್ 26 ರಂದು ಬೆಳಗಾವಿಯಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಕರೆತರುವ ಚಿಂತನೆಯಲ್ಲಿ ಸರ್ಕಾರ ಇದೆ. ಈ ಕುರಿತು ‌ಮಾತನಾಡಿದ ಸಚಿವ ಎಚ್.ಕೆ ಪಾಟೀಲ್ ಅವರು. ಮಹಾತ್ಮ ಗಾಂಧಿಯವರ ಕುರಿತು ಅಮೇರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ವಿಶೇಷ ಅಭಿಮಾನ ಹೊಂದಿದ್ದು ಅವರ ಕುರಿತು ಹಲವುಬಾರಿ ಉಲ್ಲೇಖ‌ ಮಾಡಿದ್ದು ಅವರನ್ನೇ ಕರೆತರುವ ಚಿಂತನೆ ಇದೆ ಎಂದಿದ್ದಾರೆ.

ಇನ್ನೂ ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ ಹಲವಾರು ಬಗೆಯಲ್ಲಿ ಐತಿಹಾಸಿಕ ಹಿನ್ನಲೆ ಇದೆ. ಅಂದು ನಡೆದಿದ್ದ ಅಧಿವೇಶಕ್ಕಾಗಿ ವಿಶಾಲವಾದ ಜಾಗದ ವ್ಯವಸ್ಥೆ ಮಾಡಲಾಗಿತ್ತು. ಅಧಿವೇಶನ ಹಿನ್ನಲೆಯಲ್ಲಿ ರೈಲು ನಿಲ್ದಾಣ ಪ್ರಾರಂಭಿಸಲಾಗಿತ್ತು. ಅಷ್ಟೇ ಅಲ್ಲದೆ ಅಧಿವೇಶನಕ್ಕೆ ಬಂದ ಜನರಿಗೆ ನೀರಿನ ವ್ಯವಸ್ಥೆ ಮಾಡುವುದೇ ದೊಡ್ಡ ಸವಾಲಾಗಿತ್ತು. ಈ ಸಂದರ್ಭದಲ್ಲಿ ಒಂದು ಬಾವಿ ತೋಡಲಾಗಿತ್ತು. ಈಗಲೂ ಈ ಬಾವಿ ಇದ್ದು ಈಗ ಕಾಂಗ್ರೆಸ್ ಬಾವಿ ಎಂದು ಕರೆಯಲಾಗುತ್ತದೆ. ಇದಕ್ಕೆ ಆಗ ಪಂಪಾ ಸರೋವರ ಎಂದು ಹೆಸರಿಟ್ಟಿದ್ದರು.

ಇನ್ನೂ ಅಧಿವೇಶನಕ್ಕೆ ಬಂದ ಜನರಿಗಾಗಿ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಹಾಗೂ ವಸತಿ ಕಲ್ಪಿಸಲಾಗಿತ್ತು. ಇದೇ ಸಂದರ್ಭದಲ್ಲಿ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಗೀತೆಯನ್ನು ಗಂಗೂಬಾಯಿ ಹಾನಗಲ್ ಹಾಡುವ ಮೂಲಕ ಗಾಂಧಿಜಿಯವರ ಆಶಿರ್ವಾದ ಪಡೆದಿದ್ದರು. ಒಟ್ಟಿನಲ್ಲಿ ಈ ಐತಿಹಾಸಿಕ ಅಧಿವೇಶನ ನಡೆದು ನೂರು ವರ್ಷಗಳಾಗಿದ್ದು ಮತ್ತೊಂದು ವಿಶೇಷ.

Advertisement

Leave a reply

Your email address will not be published. Required fields are marked *

error: Content is protected !!