ಮಲ್ಲಣ್ಣನ ವಿರುದ್ಧ ಢವಣ ; ಗೆಲುವು ನಮ್ಮದೆಂದ ಸಾಹುಕಾರ್…! ಏನ್ ಮಾಡ್ತಾರೆ ಅಶೋಕಣ್ಣ…?
ಬೆಳಗಾವಿ : ಅಕ್ಟೋಬರ್ ನಲ್ಲಿ ಜರುಗುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಾಮದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ನಮ್ಮ ಫೆನಲ್ ದಿಂದ ಹಾಲಿ ನಿರ್ದೇಶಕ ಶ್ರೀಕಾಂತ ಢವಣ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಕಟಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರದಂದು ಜರುಗಿದ ರಾಮದುರ್ಗ ತಾಲ್ಲೂಕಿನ ಪಿಕೆಪಿಎಸ್ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಯವರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಢವಣ ಅವರೇ ಮತ್ತೊಂದು ಬಾರಿ
ಚುನಾವಣೆಗೆ ಸ್ಪರ್ಧೆ ಮಾಡಲಿದ್ದು, ಹೆಚ್ಚಿನ ಬಹುಮತದಿಂದ ಆರಿಸಿ ತರುವಂತೆ ಮತದಾರರಿಗೆ ಅವರು ಮನವಿ ಮಾಡಿದರು.
ಬಿಡಿಸಿಸಿ ಬ್ಯಾಂಕ್ ಚುನಾವಣಾ ಪ್ರಚಾರಕ್ಕೂ ಮುನ್ನ ರಾಮದುರ್ಗ ತಾಲ್ಲೂಕಿನ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸೇರಿದಂತೆ ಅನೇಕ ಗಣ್ಯರ ಅಭಿಪ್ರಾಯ ಕೇಳಲಾಗಿತ್ತು. ಸುಮಾರು ಮೂರು ಬಾರಿ ನಿಯೋಜಿತ ಸಭೆಯನ್ನು ಮುಂದೂಡಿದರು,
ಮಹಾದೇವಪ್ಪ ಯಾದವಾಡ ಮತ್ತು ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಅವರನ್ನು ಸಂಪರ್ಕಿಸಿದರೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ಹೇಳಲಿಲ್ಲ ಎಂದರು.
ಈಗಾಗಲೇ ಪ್ರಚಾರ ಆರಂಭಿಸಿರುವ ಮಲ್ಲಣ್ಣ ಯಾದವಾಡ ನಡೆಯಿಂದ ಗೊಂದಲ ಉಂಟಾಗಿದೆ. ಇಂದಿನ ಸಭೆಯಲ್ಲಿ ರಾಮದುರ್ಗ ತಾಲ್ಲೂಕಿನ 36 ಪಿಕೆಪಿಎಸ್ ಗಳ ಪೈಕಿ ಸುಮಾರು 29 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರು ಕೂಡಿಕೊಂಡು ಶ್ರೀಕಾಂತ ಢವಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಮಲ್ಲಣ್ಣ ಯಾದವಾಡ ಸ್ಪರ್ಧೆ ಮಾಡುವ ವಿಚಾರ ಯಾವ ನಾಯಕರಿಗೂ ತಿಳಿಸಿಲ್ಲ. ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ನಮ್ಮ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಢವಣ ಅವರೇ ಅಧಿಕೃತ ಅಭ್ಯರ್ಥಿಯಾಗಿದ್ದು, ಈ ಸಂಬಂಧ ಯಾದವಾಡ ಸಹೋದರರೊಂದಿಗೆ ಮಾತುಕತೆಗೆ ಸಿದ್ಧರಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದರು.
ವೇದಿಕೆಯಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗೋಡೆ, ಮಾಜಿ ಶಾಸಕ ಅರವಿಂದ ಪಾಟೀಲ, ರಾಜೇಂದ್ರ ಅಂಕಲಗಿ, ಬಿ.ಎಸ್. ಬೆಳವಣಕಿ, ಸಿ.ಬಿ.ಪಾಟೀಲ, ಡಾ. ಕೆ.ವಿ.ಪಾಟೀಲ, ರಾಮದುರ್ಗ ಕ್ಷೇತ್ರದ ಅಭ್ಯರ್ಥಿ ಶ್ರೀಕಾಂತ ಢವಣ ಅವರು ಉಪಸ್ಥಿತರಿದ್ದರು.
*************
ಈ ಸಲ ಡಿಸಿಸಿ ಬ್ಯಾಂಕ್ ನಿರ್ದೇಶಕರ ಹುದ್ದೆಗೆ ಸ್ಪರ್ಧಿಸಿ ಗೆಲ್ಲುವ ಉತ್ಸಾಹದಲ್ಲಿ ಶಾಸಕ ಅಶೋಕ್ ಪಟ್ಟಣ ಇರುವುದು ಸ್ಪಷ್ಟ. ರಾಮದುರ್ಗದಿಂದ ಹಾಲಿ ಶಾಸಕ ಅಶೋಕ್ ಪಟ್ಟಣ ಚುನಾವಣೆ ಸ್ಪರ್ಧೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಇತ್ತ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸಹೋದರ ಮಲ್ಲಣ್ಣ ಯಾದವಾಡ ಈಗಾಗಲೇ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಇನ್ನೂ ಬಾಲಚಂದ್ರ ಜಾರಕಿಹೊಳಿ ಅವರು ಹಾಲಿ ನಿರ್ದೇಶಕ ಶ್ರೀಕಾಂತ ಢವಣ ನಮ್ಮ ಅಭ್ಯರ್ಥಿ ಎಂದು ಘೋಷಣೆ ಮಡಿದ್ದು ಡಿಸಿಸಿ ಬ್ಯಾಂಕ್ ಚುನಾವಣಾ ಕಣ ರಂಗು ಪಡೆದುಕೊಳ್ಳುತ್ತಿದೆ.


