ಬೈಲಹೊಂಗಲ ತಾಲೂಕಿನ ಮುರಗೋಡ ಹೋಬಳಿ ವ್ಯಾಪ್ತಿಯ ಗೋಮಾಳ ಸೇರಿದಂತೆ 16 ಕ್ಕೂ ಅಧಿಕ ಎಕರೆ ಜಮೀನಿನಲ್ಲಿನ ಮರಗಳನ್ನು ಕತ್ತರಿಸಿ ಅಪಾರ ಪ್ರಮಾಣದಲ್ಲಿ ಖನಿಜ ನಿಕ್ಷೇಪಗಳನ್ನು ನಿಯಮಬಾಹಿರವಾಗಿ ಗಣಿಗಾರಿಕೆ ಮಾಡಿರುವ ಆರೋಪ ಕೇಳಿಬಂದಿದ್ದು ಬೈಲಹೊಂಗಲ ಶಾಸಕರ ಕೊರಳಿಗೂ ಈ ಆರೋಪ ಸೇರಿಕೊಂಡಿದೆ.
ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಸಧ್ಯ ಬೈಲಹೊಂಗಲ ತಾಲೂಕಿನಲ್ಲಿ ಚರ್ಚೆಗಳು ಜೋರಾಗಿವೆ. ಕಳೆದ 2024 ರಿಂದ ಮುರಗೋಡದಲ್ಲಿ “ಪ್ರಿನ್ಸ್ ಎಂ ಸ್ಯಾಂಡ್” ಹೆಸರಿನ ಸಂಸ್ಥೆ ಸರಕಾರದ ಅನುಮತಿ ಪಡೆಯದೆ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವುದು ಬಯಲಾಗಿದೆ. ಇದರಿಂದ ಸರಕಾರಕ್ಕೆ ಕೋಟ್ಯಾಂತರ ರೂ. ತೆರಿಗೆ ವಚನೆ ಹಾಗೂ ಅಪಾರ ಪ್ರಮಾಣದಲ್ಲಿ ಸಸ್ಯ ಸಂಕುಲ ಹಾನಿಗೊಳಪಡಿಸಿದ ಘಟನೆ ಬಯಲಾಗಿದ್ದು ಜನರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.
ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಹಾಗೂ ಬಿಜೆಪಿ ಕಾಂಗ್ರೆಸ್ ಶಾಸಕರ ವಿರುದ್ಧ ಗಂಭೀರ ಆರೋಪ ಮಾಡಿವೆ. ಅಮೃತ ಸರೋವರ ಯೋಜನೆಯಡಿ ಕೆರೆ ನಿರ್ಮಾಣಕ್ಕೆ ಗುರುತಿಸಲಾಗಿದ್ದ ಜಮೀನು ಹಾಗೂ ಗಣಿಗಾರಿಕೆ ಚಟುವಟಿಕೆಗಳ ಕುರಿತು ಹಲವು ಪ್ರಶ್ನೆಗಳು ಎದ್ದಿದ್ದು, ಪ್ರಕರಣದ ಸತ್ಯಾಸತ್ಯತೆ ಬಹಿರಂಗಪಡಿಸಲು ಜಿಲ್ಲಾಡಳಿತ ನಿಷ್ಪಕ್ಷಪಾತ ತನಿಖೆ ನಡೆಸಿ, ಸಂಬಂಧಿತ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ಬಿಜೆಪಿ–ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ.
ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ,ಮಾತನಾಡಿ. ಶಾಸಕ ಮಹಾಂತೇಶ ಕೌಜಲಗಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದ ಇಲಾಖೆಗಳ ವರದಿ, ವಿಧಿಸಿರುವ ದಂಡ ಹಾಗೂ ಕಂದಾಯ, ಗಣಿ ಮತ್ತು ಭೂವಿಜ್ಞಾನ ಸೇರಿದಂತೆ ಸಂಬಂಧಿತ ಇಲಾಖೆಗಳ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಜಮೀನಿನಲ್ಲಿ ಅತಿಕ್ರಮಣ ಅಥವಾ ಅಕ್ರಮ ಗಣಿಗಾರಿಕೆ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹಾಗೂ ಬಿಜೆಪಿ ಮುಖಂಡ ಗುರು ಮೆಟಗುಡ್ಡ ಮಾತನಾಡಿ, ಮುರಗೋಡ ಗ್ರಾಮದ ಸರ್ವೇ ನಂಬರ್ 928ರ ಗೈರಾಣ ಜಮೀನಿನಲ್ಲಿ ಅಮೃತ ಸರೋವರ ಯೋಜನೆಯಡಿ ಕೆರೆ ನಿರ್ಮಾಣಕ್ಕೆ ಸಂಬಂಧಿಸಿದ ಆದೇಶವನ್ನು ಜಿಲ್ಲಾಧಿಕಾರಿಗಳು ಹಿಂಪಡೆದಿರುವ ವಿಚಾರದ ಕುರಿತು ಸ್ಪಷ್ಟನೆ ನೀಡಬೇಕು ಎಂದರು.
ಡಿಎಚ್‌ಡಿ ಕಂಪನಿಯು ಅನುಮತಿಯಿಲ್ಲದೆ 106 ಎಕರೆ ಪ್ರದೇಶದಲ್ಲಿ ಮಣ್ಣು ಮತ್ತು ಕಲ್ಲು ತೆಗೆದಿದೆ ಎಂಬ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಪತ್ರ, ತನಿಖೆ ನಡೆಸಿದ ಇಲಾಖೆಗಳು ಹಾಗೂ ತಹಶೀಲ್ದಾರರು ಸೇರಿದಂತೆ ಸಂಬಂಧಿತ ಅಧಿಕಾರಿಗಳು ನೀಡಿರುವ ವರದಿಗಳನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಆಗ್ರಹಿಸಿದರು.
ವಿವಾದಿತ ಪ್ರದೇಶಕ್ಕೆ ಶಾಸಕರು ಖುದ್ದಾಗಿ ಭೇಟಿ ನೀಡಿ, ಸಂಬಂಧಿತ ಸರ್ವೇ ನಂಬರ್‌ಗಳನ್ನು ಗುರುತಿಸಿ ಜಿಪಿಎಸ್ ಆಧಾರಿತ ಸ್ಥಳ ಪರಿಶೀಲನೆ ನಡೆಸುವ ಮೂಲಕ ಜಮೀನಿನ ಸ್ವರೂಪ ಹಾಗೂ ಗಣಿಗಾರಿಕೆಯ ವ್ಯಾಪ್ತಿಯನ್ನು ಸ್ಪಷ್ಟಪಡಿಸಬೇಕು ಎಂದು ಮುಖಂಡರು ಒತ್ತಾಯಿಸಿದರು. ಇದೇ ವೇಳೆ ಸರ್ಕಾರಿ ಆಸ್ಪತ್ರೆಯ ಔಷಧ ಮತ್ತು ಉಪಕರಣಗಳ ಖರೀದಿ, ಕಿತ್ತೂರು ರಾಣಿ ಚೆನ್ನಮ್ಮ ಸ್ಮಾರಕದ ಅಭಿವೃದ್ಧಿ, ಸಾರ್ವಜನಿಕ ಹಣದ ಬಳಕೆಯಲ್ಲಿನ ಪಾರದರ್ಶಕತೆ ಹಾಗೂ ಮುರಗೋಡ ಪೊಲೀಸ್ ಠಾಣೆಯ ಕಾರ್ಯವೈಖರಿ ಕುರಿತೂ ಪ್ರಶ್ನೆಗಳನ್ನು ಎತ್ತಿದರು.
ಮುರಗೋಡ ಪ್ರಕರಣದಲ್ಲಿ ಅತಿಕ್ರಮಣದ ಪ್ರಮಾಣ, ಗಣಿಗಾರಿಕೆಯ ವ್ಯಾಪ್ತಿ, ವಿಧಿಸಿರುವ ದಂಡ ಹಾಗೂ ಇಲಾಖೆಗಳು ಕೈಗೊಂಡ ಕ್ರಮಗಳ ಕುರಿತು ದಾಖಲೆ ಆಧಾರಿತ ಸ್ಪಷ್ಟನೆ ದೊರೆಯಬೇಕು. ಆರೋಪಗಳು ಸತ್ಯಕ್ಕೆ ದೂರವಾಗಿದ್ದರೆ ಅದನ್ನು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ಆದರೆ, ಸತ್ಯಾಂಶ ಬಹಿರಂಗವಾಗುವವರೆಗೆ ಕಾನೂನುಬದ್ಧ ಹೋರಾಟ ಮುಂದುವರಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.
ಶಾಸಕರು ಹೇಳುವುದೇನು…? ಆರೋಪಗಳ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಸಮಗ್ರ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿದ್ದು, ಸುಮಾರು ಮೂರು ಮೆಟ್ರಿಕ್ ಟನ್‌ಗಳಷ್ಟು ಖನಿಜವನ್ನು ನಿಯಮಬಾಹಿರವಾಗಿ ಗಣಿಗಾರಿಕೆ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯ ಸೆಕ್ಷನ್ 24(1) ಹಾಗೂ 21(2) ಸವದತ್ತಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈ ಹಿಂದೆ ನಡೆದಿದ್ದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರೂ 5 ಲಕ್ಷ ದಂಡವನ್ನು ಪಾವತಿಸಲಾಗಿದ್ದು, ಪ್ರಸ್ತುತ ಪರಿಶೀಲನೆಯಲ್ಲಿ ಮತ್ತೆ ರೂ 34.14 ಲಕ್ಷ ದಂಡ ವಿಧಿಸಲಾಗಿದೆ ಎಂದು ಹೇಳಿದರು.
ಪ್ರಿನ್ಸ್ ಎಂ ಸ್ಯಾಂಡ್ ಸಂಸ್ಥೆಗೆ ಸರ್ಕಾರದಿಂದ ಅನುಮತಿ ನೀಡಿರುವ ಪ್ರದೇಶವನ್ನು ಹೊರತುಪಡಿಸಿ ಬೇರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಸರ್ಕಾರಿ ಜಮೀನನ್ನು ಅತಿಕ್ರಮಿಸಿಕೊಂಡು ಕೃಷಿ ಮಾಡುತ್ತಿರುವ ಆರೋಪವೂ ಕೇಳಿಬಂದಿದ್ದು, ಸುಮಾರು ಎಂಟು ಮಂದಿ 18 ಎಕರೆ ಜಮೀನನ್ನು ಬಳಸುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಈಗಾಗಲೇ ಮೊದಲ ಹಾಗೂ ಎರಡನೇ ನೋಟಿಸ್‌ಗಳನ್ನು ನೀಡಲಾಗಿದ್ದು, ಅಗತ್ಯವಿದ್ದಲ್ಲಿ ಮೂರನೇ ನೋಟಿಸ್ ನೀಡಿ, ನಂತರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಮಾಜಿ ಸೈನಿಕರಿಗೆ ಸರ್ಕಾರದಿಂದ ಅಧಿಕೃತವಾಗಿ ಮಂಜೂರಾಗಿರುವ ಜಮೀನನ್ನು ಹೊರತುಪಡಿಸಿ ಉಳಿದ ಜಮೀನಿನ ಅಕ್ರಮ ಬಳಕೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.
ತಮ್ಮ ವಿರುದ್ಧವಾಗಲಿ, ಅಧಿಕಾರಿಗಳ ವಿರುದ್ಧವಾಗಲಿ ಯಾವುದೇ ರೀತಿಯ ತನಿಖೆ ನಡೆದರೂ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. “ಸರ್ಕಾರಿ ಆಸ್ತಿ ಎಂದರೆ ನಮ್ಮೆಲ್ಲರ ಆಸ್ತಿ. ಅದನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನಮ್ಮ ಕಾರ್ಯಕರ್ತರು ಅಥವಾ ಯಾರೇ ಆಗಿರಲಿ ತಪ್ಪು ಮಾಡಿದ್ದರೆ ತನಿಖೆ ನಡೆಸಿ ಸಾಬೀತಾದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು” ಎಂದು ಅವರು ಸ್ಪಷ್ಟಪಡಿಸಿದರು.
ಮುರಗೋಡ ಹೋಬಳಿಯ ಅಭಿವೃದ್ಧಿಗೆ ಸರ್ಕಾರದಿಂದ ಸುಮಾರು ₹200 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಇದನ್ನು ಸಹಿಸದ ವಿರೋಧಿಗಳು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಕೌಜಲಗಿ ಆರೋಪಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವ ಉದ್ದೇಶದಿಂದ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ, ಅಕ್ರಮ ಗಣಿಗಾರಿಕೆ ಸೇರಿದಂತೆ ಯಾವುದೇ ವಿಚಾರದಲ್ಲಿ ಯಾವುದೇ ಸಂಸ್ಥೆ ಅಥವಾ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆದರೂ ಅದನ್ನು ಸ್ವಾಗತಿಸುವುದಾಗಿ ಹಾಗೂ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಪುನರುಚ್ಚರಿಸಿದರು.




