ಮನೆ ಮುಂದಿನ ದಾರಿಗಾಗಿ ಜಗಳ ; ಯುವಕನ ಕೊಲೆಗೈದ ವ್ಯಕ್ತಿ ಬಂಧನ
ಬೈಲಹೊಂಗಲ : ಮನೆ ಮುಂದಿನ ದಾರಿಯಲ್ಲಿ ಹಾಯ್ದಾಡುವ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಯುವಕನನ್ನು ಕುಡಗೋಲಿನಿಂದ ಇರಿದು ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಬೈಲಹೊಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.
ರುದ್ರಯ್ಯ ಬಸಯ್ಯ ಉಜನಿಮಠ (36) ಬಂಧಿತ ಆರೋಪಿ.
ಮಾ.17 ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ಮಹೇಶ ಬಸಯ್ಯ ಉಜನಿಮಠ (33) ಎಂಬಾತನನ್ನು ಹತ್ಯೆ ಮಾಡಲಾಗಿತ್ತು.
ಮನೆಯ ಮುಂದೆ ಹಾಯ್ದಾಡುವ ದಾರಿಯ ವಿಚಾರವಾಗಿ ಉಂಟಾದ ವೈಷಮ್ಯದಿಂದಾಗಿ ಇಬ್ಬರ ನಡುವೆ ಪದೇಪದೇ ಜಗಳ ನಡೆಯುತ್ತಿತ್ತು. ಘಟನೆ ದಿನ ಮಹೇಶ ಮನೆಗೆ ಬರುವ ವೇಳೆ ಆರೋಪಿತನು ಕುಡಗೋಲಿನಿಂದ ಹಿಂದಿನಿಂದ ದಾಳಿ ನಡೆಸಿ ಕುತ್ತಿಗೆಗೆ ಗಂಭೀರ ಗಾಯಗೊಳಿಸಿದ್ದಾನೆ. ಪರಿಣಾಮ ಮಹೇಶ ರಕ್ತಸ್ರಾವದಿಂದ ಮೃತಪಟ್ಟಿದ್ದ.
ಈ ಕುರಿತು ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಕೊಂಡು ತನಿಖೆ ಕೈಗೊಂಡ ಪೊಲೀಸರು, ಹಳೆಯ ದ್ವೇಷವೇ ಕೊಲೆಗೆ ಕಾರಣವೆಂದು ಪತ್ತೆ ಹಚ್ಚಿದ್ದಾರೆ. ಮಾರ್ಚ್ 18ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಹಾಗೂ ಡಿಎಸ್ಪಿ ವೀರಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‌ಐ ಹೆಚ್.ಕೆ ಪಾಟೀಲ ನೇತೃತ್ವದ ತಂಡ ಪ್ರಕರಣವನ್ನು ಭೇದಿಸಿದೆ.


