ಹೆಚ್ಚಾದ ಭಕ್ತರ ದಂಡು ; ಸದ್ದಿಲ್ಲದೆ ನಡೆದ ಸೇವೆ ; ಕಣ್ಮುಚ್ಚಿ ಕುಳಿತ ಬೈಲಹೊಂಗಲ ಪೊಲೀಸ್..! ಇದು ಚಾಮುಂಡೇಶ್ವರಿ ಮಹಾತ್ಮೆ…!
ಬೆಳಗಾವಿ : ಕಳೆದ ಕೆಲ ತಿಂಗಳಿನಿಂದ ಬೈಲಹೊಂಗಲ ತಾಲೂಕು ಕೇಂದ್ರದಿಂದ ಕೇವಲ ಮೂರು ಕಿ.ಮೀಟರ್ ದೂರದಲ್ಲಿ ಒಂದು ಕ್ಷೇತ್ರ ತುಂಬಾ ಹೆಸರು ಮಾಡುತ್ತಿದೆ. ದಿನಗಳೆದಂತೆ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಅದೆಷ್ಟೋ ನಂಬಿಕೆ ಹೊತ್ತ ಜನ ಈ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ತಾಲೂಕಿನ ಮರಕುಂಬಿ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯ ಸಧ್ಯ ಭಕ್ತರ ಪಾಲಿಗೆ ಆರಾಧ್ಯ ಕೇಂದ್ರ. ಬೇಡಿ ಬಂದ ಭಕ್ತರ ಕೈ ಬಿಡುವುದಿಲ್ಲ ಎಂಬ ನಂಬಿಕೆ. ಕೆಲಸ ಸಾಮಾಜಿಕ ಜಾಲತಾಣದಲ್ಲಿ ಕ್ಷೇತ್ರದ ಕುರಿತು ಸಾಕಷ್ಟು ಪ್ರಚಾರ. ಇವೆಲ್ಲವೂ ಕೆಲ ದಿನಗಳಿಂದ ಜೋರಾಗಿ ನಡೆಯುತ್ತಿವೆ.
ನಂಬಿಕೆ ಹೊತ್ತು ರಾಜ್ಯದ ನಾನಾ ಭಾಗಗಳಿಂದ ಜನ ಏನೋ ಬರುತ್ತಿದ್ದಾರೆ. ಆದರೆ ಪುಟ್ಟ ಗ್ರಾಮವಾದ ಮರಕುಂಬಿಯಲ್ಲಿ ಈ ಪ್ರಮಾಣದಲ್ಲಿ ಜನ ಬಂದರೆ ಸಂಬಂಧಪಟ್ಟವರು ಯಾವೆಲ್ಲಾ ಕ್ರಮ ಕೈಗೊಂಡಿದ್ದಾರೆ ಎಂಬುದು ತುಂಬಾ ಮುಖ್ಯವಾಗುತ್ತದೆ.
ಸಧ್ಯ ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕ್ಷೇತ್ರ ಬರುತ್ತದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದರೆ ಅತ್ತ ಸರಿಯಾದ ಭದ್ರತೆ ನೀಡಬೇಕಾದ ಜೋಡಿ ತಾಲೂಕಿನ ಪೊಲೀಸರು ಅತ್ತ ಸುಳಿಯುತ್ತಿಲ್ಲ. ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ ಎಂಬ ಪ್ರಶ್ನೆಯೂ ಮೂಡಿದೆ.
ಇನ್ನೂ ಬರುವ ಜನರಿಗೆ ಸಿಗಬೇಕಾದ ಸೂಕ್ತ ಸೌಕರ್ಯವೂ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರಿಗೆ ಸೂಚನೆ ನೀಡುವ ಅಧಿಕಾರಿ ವರ್ಗವೂ ಈಕಡೆ ತಲೆ ಹಾಕದಿರುವುದು ವಿಪರ್ಯಾಸವೇ ಸರಿ.


