ಅಥಣಿ ಹೆಸ್ಕಾಂ ಅಧಿಕಾರಿಗಳ ಬೆವರಿಳಿಸಿದ ಉಪವಿಭಾಗೀಯ ಮುಖ್ಯ ಅಭಿಯಂತರ ; ಉಡಾಫೆ ಮಾಡುವವರ ವಿರುದ್ಧ ಕ್ರಮಕ್ಕೆ ಸೂಚನೆ
ಅಥಣಿ : ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಸ್ವತಃ ಅಥಣಿ ಹೆಸ್ಕಾಂ ಇಲಾಖೆ ಅಧಿಕಾರಿಯೇ ತೊಡಕಾಗಿದ್ದರ ಕುರಿತು ಬೆಳಗಾವಿ ವಾಯ್ಸ್ ವರದಿ ಬಂದ ಬೆನ್ನಲ್ಲೇ, ಹೆಸ್ಕಾಂ ಉಪವಿಭಾಗೀಯ ಮುಖ್ಯ ಅಭಿಯಂತರ ದೀಪಕ ರಾಥೋಡ ಅಥಣಿ ಹೆಸ್ಕಾಂ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಬೆವರಿಳಿಸಿದ್ದಾರೆ.
ಅಥಣಿ ಹೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿ ಪ್ರಶ್ನಿಸಿ ಕಳೆದ ಮೂರು ದಿನಗಳ ಹಿಂದೆಯಷ್ಟೇ ಹೆಸ್ಕಾಂ ಗುತ್ತಿಗೆದಾರರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಈ ಕುರಿತು ಅಧಿಕಾರಿಗಳ ಬಳಿ ಮಾಹಿತಿ ಪಡೆದು ಶನಿವಾರ ಸಭೆ ನಡೆಸಿದ ಉಪವಿಭಾಗೀಯ ಮುಖ್ಯ ಅಭಿಯಂತರ ದೀಪಕ ರಾಥೋಡ, ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ನಾಯಿ ಬಾಲ ಡೊಂಕ ಎಂಬಂತೆ ಇಲ್ಲಿನ ಅಧಿಕಾರಿಗಳು ವರ್ತಿಸುತ್ತಿರುವುದು ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಗುತ್ತಿಗೆದಾರರು ಮತ್ತು ಗ್ರಾಹಕರು ಸಮಸ್ಯೆಗಳನ್ನು ಪರಿಹರಿಸುವಂತೆ ತಮ್ಮ ಹತ್ತಿರ ಬಂದಾಗ ಸೌಜನ್ಯದಿಂದ ವರ್ತಿಸದೆ ನಮಗೆ ಇಲ್ಲಿ ನೌಕರಿ ಮಾಡುವುದು ಇಷ್ಟ ಇಲ್ಲ, ಕಾಟಾಚಾರಕ್ಕೆ ಕೆಲಸ ಮಾಡುತ್ತಿದ್ದೇವೆ ಎಂಬ ಉಡಾಫೆ ಉತ್ತರ ನಿಮ್ಮಿಂದ ಬರುತ್ತಿರುವುದು ನಾಚಿಕೆಗೇಡಿನ ಸಂಗತಿ.
ನಿಮಗೆ ಕೆಲಸದ ಮೇಲೆ ಇಚ್ಛೆ ಇಲ್ಲದಿದ್ದರೆ, ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡದೇ ಇದ್ದರೆ ಇಲ್ಲಿಗೆ ಯಾಕೆ ಬರಬೇಕು ಎಂದು ಹೆಸ್ಕಾಂ ಅಧಿಕಾರಿ ಗಿರಮಲ್ಲ ಅವಟಿ ಸೇರಿದಂತೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಇಲ್ಲಿ ತಮ್ಮ ಸಲಹೆಯಂತೆ ಕಾರ್ಯನಿರ್ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಮಾಹಿತಿ ರವಾನಿಸುವಂತೆ ಕಾರ್ಯನಿರ್ವಾಹಕ ಅಭಿಯಂತ ಸಿಬಿ ಯಕ್ಕಂಚಿ ಅವರಿಗೆ ಸೂಚಿಸಿದರು.
ಹೆಸ್ಕಾಂ ಉಪ ವಿಭಾಗೀಯ ಅಧಿಕಾರಿ ದೀಪಕ ರಾಥೋಡ ನಂತರ ಗುತ್ತಿಗೆದಾರರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಗುತ್ತಿಗೆರಾದಾರರ ಸಂಘದ ಅಧ್ಯಕ್ಷ ಜಗದೀಶ ಅವಟಿ ಮಾತನಾಡಿ ಕಳೆದ ಮೇ ತಿಂಗಳಿನಿಂದ ನಮ್ಮ ಗುತ್ತಿಗೆದಾರರ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಹೆಸ್ಕಾಂ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಇತ್ತೀಚಿಗೆ ಅಥಣಿಗೆ ಆಗಮಿಸಿದಾಗ ಇಲ್ಲಿನ ಅಧಿಕಾರಿಗಳು ಕೆಲವು ಮಾಹಿತಿಯನ್ನ ಮುಚ್ಚುಡುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಅನೇಕ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಗುತ್ತಿಗೆದಾರರ ಮತ್ತು ಅನೇಕ ಗ್ರಾಹಕರ ಸಮಸ್ಯೆಗಳನ್ನು ಆಲಿಸಿದ ಅಧಿಕಾರಿಗಳು ಇಲ್ಲಿನ ವಾಸ್ತವ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ರೂಪಿಸಲಾಗುವುದು ಎಂದು ಹೇಳಿದರು.

