ಇವರೇ ನಮ್ಮ ರಿಯಲ್ ಹೀರೋಗಳು ಎಂದ ಎಸ್ಪಿ ; ಕಲ್ಲೇಟು ತಿಂದು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸ್
ಬೆಳಗಾವಿ : ಅಪಹರಣಗೊಂಡ ಮಕ್ಕಳ ರಕ್ಷಣೆ ಸಂದರ್ಭದಲ್ಲಿ ಆರೋಪಿಗಳಿಂದ ಹಲ್ಲೆಗೊಳಗಾದ ಅಥಣಿ ಪೊಲೀಸ್ ಠಾಣೆ ಸಿಬ್ಬಂದಿಗಳನ್ನು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಭೇಟಿಮಾಡಿ ಆರೋಗ್ಯ ವಿಚಾರಿಸಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಥಣಿ ಪೊಲೀಸ್ ಠಾಣೆ ಪೇದೆ ರಮೇಶ್ ಹಾದಿಮನಿ ಹಾಗೂ ಜಮೀರ್ ಡಾಂಗೆ ಯನ್ನು ಶುಕ್ರವಾರ ಎಸ್ಪಿ ಭೇಟಿಯಾಗಿ ಆರೋಗ್ಯ ವಿಚಾರಿಸುವ ಸಂದರ್ಭದಲ್ಲಿ ಇವರೇ ನಮ್ಮ ಹೀರೋಗಳು ಎಂದು ಸಿಬ್ಬಂದಿ ಕಾರ್ಯವೈಖರಿ ಶ್ಲಾಘಿಸಿದರು.
ಕಲ್ಲೇಟು ಬಿದ್ದರು ಎದೆಗುಂದೆ ಇಬ್ಬರು ಮಕ್ಕಳನ್ನು ರಕ್ಷಿಸಿದ್ದು ಮಾತ್ರವಲ್ಲದೆ ಆರೋಪಿಗಳನ್ನು ಬಂಧಿಸುವಲ್ಲಿ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ರಕ್ಷಣೆಗಾಗಿ ಅಥಣಿ ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.
ಪಿಎಸ್ಐ ಸಮಯ ಪ್ರಜ್ಞೆ ಹಾಗೂ ಪೊಲೀಸ್ ಇಬ್ಬರು ಪೇದೆಗಳ ಪ್ರಯತ್ನದ ಫಲವಾಗಿ ಮಕ್ಕಳ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


