ಅಥಣಿ : ಅಂಬೇಡ್ಕರ್ ಜಯಂತಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಜಗಳ ; ನಾಲ್ವರ ತಲೆಗೆ ಗಾಯ..!

ಅಥಣಿ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯ ಸಂಭ್ರಮದ ಮಧ್ಯೆ ಬ್ಯಾನರ್ ಕಟ್ಟುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗ್ರಾಮದಲ್ಲಿ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಬ್ಯಾನರ್ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.
ನೋಡನೋಡುತ್ತಿದ್ದಂತೆಯೇ ಈ ವಾಗ್ವಾದ ವಿಕೋಪಕ್ಕೆ ತಿರುಗಿ, ಪರಸ್ಪರ ಗುಂಪುಗಳ ನಡುವೆ ದೊಡ್ಡ ಮಟ್ಟದ ಗಲಾಟೆ ನಡೆದಿದೆ.
ಪ್ರವೀಣ್ ಹಣಮಂತ ಭಜಂತ್ರಿ ಎಂಬುವವರು ಬ್ಯಾನರ್ ಕಟ್ಟುತ್ತಿದ್ದಾಗ ರೋಹನ್ ಚಿದಾನಂದ ಕಾಂಬಳೆ, ಚಿದಾನಂದ ರಾಮಪ್ಪ ಕಾಂಬಳ, ವಿವೇಕ ಚಿದಾನಂದ ಕಾಂಬಳೆ ಮುಂತಾದವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದು ನಮ್ಮ ಏರಿಯಾ ನೀನು ಯಾಕೆ ಇಲ್ಲಿ ಬ್ಯಾನರ್ ಕಟ್ಟುತ್ತೀಯಾ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಮಾತಿಗೆ ಮಾತು ಬೆಳೆದು ಸನ್ನಿವೇಶ ವಿಕೋಪಕ್ಕೆ ತಿರುಗಿತ್ತು.
ಈ ಸಂಘರ್ಷದ ವೇಳೆ ನಾಲ್ವರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳದಲ್ಲಿ ಸದ್ಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.


