ಅಶೋಕ್ ಚಂದರಗಿ ಅವರಿಗೆ ಚಂಪಾ ಸಿರಿಗನ್ನಡ ಪ್ರಶಸ್ತಿ ಪ್ರದಾನ
ಬೆಳಗಾವಿ : ಹಿರಿಯ ಕನ್ನಡ ಹೋರಾಟಗಾರ ಹಾಗೂ ಪತ್ರಕರ್ತ ಅಶೋಕ ಚಂದರಗಿ ಅವರಿಗೆ ಸಿರಿಗನ್ನಡ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಬುಧವಾರ ಬೆಂಗಳೂರಿನ ಕರ್ನಾಟಕ ಸ್ವಾಭಿಮಾನಿ ವೇದಿಕೆಯು ದಿ.ಚಂದ್ರಶೇಖರ ಪಾಟೀಲ ( ಚಂಪಾ) ಸ್ಮರಣಾರ್ಥ ಪ್ರತಿವರ್ಷ ನೀಡುವ ಚಂಪಾ ಸಿರಿಗನ್ನಡ ಪ್ರಶಸ್ತಿಯನ್ನು ಖ್ಯಾತ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರು ಅಶೋಕ ಚಂದರಗಿಗೆ ಪ್ರಶಸ್ತಿ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಂಪಾ ಪುತ್ರಿ ಮೀನಾ ಪಾಟೀಲ, ವೇದಿಕೆಯ ಅಧ್ಯಕ್ಷ ಶಂಕರ ಹೂಗಾರ, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ವೇದಿಕೆಯಲ್ಲಿದ್ದರು.
ಗಡಿನಾಡ ಹೋರಾಟಗಾರ ಅಶೋಕ್ ಚಂದರಗಿ :
ಗಡಿನಾಡ ಕನ್ನಡ ಹೋರಾಟಗಾರರೆಂದೇ ಪ್ರಸಿದ್ಧರಾದ ಅಶೋಕ ಚಂದರಗಿ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ದಿನಾಂಕ 04/12/1959 ರಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಚಂದರಗಿ ಅವರು 1982 ರಲ್ಲಿ ರಾಜ್ಯಾದ್ಯಂತ ಜನಾಂದೋಲನಗೊಂಡಿದ್ದ ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಕನ್ನಡ ಚಳವಳಿಯಲ್ಲಿ ಕ್ರಿಯಾಶೀಲರಾದರು.
ನಾಡು, ನುಡಿ, ನೆಲ, ಜಲದ ಬಗ್ಗೆ ಗಡಿ ಭಾಗದ ಕನ್ನಡಿಗರನ್ನು ಸದಾ ಜಾಗೃತಿಗೊಳಿಸುತ್ತಾ ಕನ್ನಡ ನಾಡು – ನುಡಿಯ ಸೇವೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ ಚಂದರಗಿರವರು 1991 ರಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯನ್ನು ಸ್ಥಾಪನೆ ಮಾಡಿ ತನ್ಮೂಲಕ ಗಡಿನಾಡಿನಲ್ಲಿ ನಾಡು ನುಡಿಯ ಸಂರಕ್ಷಣೆಗಾಗಿ ಕನ್ನಡಿಗರನ್ನು ಸಂಘಟಿಸುತ್ತಾ ಕನ್ನಡದ ಗಟ್ಟಿದನಿಯಾದರು.
ಬರಹಗಾರರಾದ ಚಂದರಗಿರವರು ಬೆಳಗಾವಿಯ ಪ್ರಮುಖ ಪತ್ರಿಕೆಯಾದ ಕನ್ನಡಮ್ಮ ಮತ್ತು ನಾಡೋಜ ದಿನಪತ್ರಿಕೆಗಳಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ಅಭಿಮಾನಿ ಹಾಗೂ ಅರಗಿಣಿ ವಾರಪತ್ರಿಕೆಗಳ ಬೆಳಗಾವಿ ಜಿಲ್ಲಾ ವರದಿಗಾರರಾಗಿದ್ದರು.
ಅಶೋಕ ಚಂದರಗಿ ಅವರ ಕನ್ನಡ ಸೇವೆಯನ್ನು ಗುರುತಿಸಿ ಪ್ರಸ್ತುತ ಗಡಿನಾಡ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ಕರ್ನಾಟಕ ಸರ್ಕಾರ ನೇಮಕ ಮಾಡಿದೆ. ಬೆಳಗಾವಿ ಗಡಿ ನಾಡ-ನುಡಿಯ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಅಶೋಕ ಚಂದರಗಿ ಅವರಿಗೆ ರಾಜ್ಯ ಸರ್ಕಾರವು ಸೇರಿದಂತೆ ಹಲವಾರು ಕನ್ನಡ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.


