ಅಕ್ಕಪಡೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ; ಏನಿದು ಅಕ್ಕಪಡೆ…?

ಬೆಳಗಾವಿ : ಅಕ್ಕಪಡೆ ಮಹಿಳೆಯರ ಶಕ್ತಿ, ಮಹಿಳೆಯರ ಸ್ವಾಭಿಮಾನದ ಪ್ರತೀಕ, ಶೀಘ್ರವೇ ತಾಲೂಕು ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ನಗರದ ಹೃದಯ ಭಾಗ ಕಿತ್ತೂರು ಚೆನ್ನಮ್ಮ ಸರ್ಕಲ್‌ನಲ್ಲಿ ಅಕ್ಕಪಡೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಸದ್ಯಕ್ಕೆ ಪ್ರಾಯೋಗಿಕವಾಗಿ ಕೆಲವು ಸ್ಥಳಗಳಲ್ಲಿ ಅಕ್ಕಪಡೆ ಆರಂಭಿಸಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂಬರುವ ಬಜೆಟ್‌ನಲ್ಲಿ ಅಂಗೀಕಾರ ಪಡೆದು ತಾಲೂಕು ಮಟ್ಟಕ್ಕೂ ಅಕ್ಕಪಡೆ ವಿಸ್ತರಿಸಲಾಗುವುದು ಎಂದರು.
ಅಕ್ಕಪಡೆ ಎಂದರೆ ಮಹಿಳೆಯರಿಗೆ ಹಾಗೂ ಮಕ್ಕಳ ಪಾಲಿಗೆ ಭರವಸೆ ಇದ್ದಂತೆ. ಜಿಲ್ಲೆಯಾದ್ಯಂತ ಮಹಿಳೆಯರು, ಮಕ್ಕಳು ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೀಗ ಅದರ ಮುಂದುವರಿದ ಭಾಗವಾಗಿ ಅಕ್ಕಪಡೆಯನ್ನು ರಚಿಸಲಾಗಿದೆ ಎಂದು ಸಚಿವರು ಹೇಳಿದರು.
ಅಕ್ಕಪಡೆ ಸಿಬ್ಬಂದಿ ಸಾರ್ವಜನಿಕ ಸ್ಥಳಗಳಾದ ಮಾಲ್, ಜಾತ್ರಾ ಮಹೋತ್ಸವ, ಲೇಡಿಸ್ ಹಾಸ್ಟೆಲ್‌ಗಳು, ಕಾಲೇಜುಗಳು, ಸಮುದಾಯ ಭವನ ಸೇರಿದಂತೆ ಜನನಿಬೀಡ ಪ್ರದೇಶಗಳಿಗೆ ಭೇಟಿ ಕೊಡಲಿದ್ದಾರೆ. ಅಕ್ಕಪಡೆಯ ಉದ್ದೇಶ ಸಫಲವಾಗಬೇಕು ಎಂದರೆ ನಾಗರಿಕ ಸಮಾಜ ಕೂಡ ಇದಕ್ಕೆ ಬೆಂಬಲ ನೀಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.
ಬೇರು ಮಟ್ಟದಿಂದಲೇ ಬಾಲ್ಯವಿವಾಹವನ್ನು ತಡೆಗಟ್ಟುವುದೇ ಅಕ್ಕಪಡೆ ಉದ್ದೇಶ, ಜೊತೆಗೆ ಬಾಲ ಗರ್ಭಿಣಿ, ಪೋಕ್ಸೋ ಕೇಸ್‌ಗಳನ್ನು ಕಿತ್ತುಹಾಕಬೇಕು. ಮಹಿಳೆಯರು ನಿರ್ಭಿತಿಯಿಂದ ಓಡಾಡಬೇಕು ಎಂಬುದೇ ಅಕ್ಕಪಡೆ ಉದ್ದೇಶ ಎಂದು ಹೇಳಿದರು.
ಅಕ್ಕಪಡೆ ಎಂದರೆ ಆಸರೆ, ಶಕ್ತಿ, ಸ್ವಾಭಿಮಾನ, ನಾಗರಿಕ ಸಮಾಜದಲ್ಲಿ ಎಲ್ಲರೂ ಕೂಡ ನ್ಯಾಯಯುತವಾಗಿ ನಡೆದುಕೊಳ್ಳಬೇಕು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ದೌರ್ಜನ್ಯಕ್ಕೊಳಗಾಗಿ ದೂರು ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
ಮಕ್ಕಳ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ದಿನದ 24 ಗಂಟೆಯೂ ಸಹಾಯವಾಣಿಗಳನ್ನು ತೆರೆಯಲಾಗಿದೆ. ನಮ್ಮ ಇಲಾಖೆಯಿಂದ ಸಹಾಯವಾಣಿ ತೆರೆಯಲಾಗಿದ್ದು, 1098 ಸಂಖ್ಯೆಗೆ ಕರೆ ಮಾಡಬಹುದು. ಅಕ್ಕ ಪಡೆಗೆ ಮಹಿಳಾ ಸಹಾಯವಾಣಿ 181, ಜೊತೆಗೆ ಪೊಲೀಸ್ ಇಲಾಖೆಯ 112 ಸಂಖ್ಯೆಗೆ ಕರೆ ಮಾಡಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ಅಂಟಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಹಾಯವಾಣಿಯನ್ನು ಹೆಣ್ಣುಮಕ್ಕಳು ಸೂಕ್ತರೀತಿಯಲ್ಲಿ ಬಳಸಿಕೊಳ್ಳಬೇಕು, ನಿಮ್ಮ ಮನೆಗಳಲ್ಲಿ ತೊಂದರೆ ಅನುಭವಿಸುತ್ತಿದ್ದರೂ ಸಹಾಯವಾಣಿ ಮೂಲಕ ಅಕ್ಕಪಡೆಯನ್ನು ಸಂಪರ್ಕಿಸಬಹುದು. ಸಂಕಷ್ಟದಲ್ಲಿರುವವರಿಗೆ ಆಸರೆ ನೀಡಲು ಅಕ್ಕಪಡೆ ಎಲ್ಲರ ಜೊತೆಗೆ ಕೈಜೋಡಿಸಲಿದೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆ ರಾಜ್ಯ ಅಕ್ಕಪಡೆಯ ಸಂಯೋಜಕರಾದ ಶ್ರೀಮತಿ ಸೈನಿ ನೇತೃತ್ವದ ಬೀದರ್ ಜಿಲ್ಲೆಯ ಅಕ್ಕಪಡೆಯ ವತಿಯಿಂದ ಆತ್ಮರಕ್ಷಣೆಯ ಕುರಿತು ಸಾಹಸ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಆಯುಕ್ತರಾದ ಭೂಷಣ್ ಗುಲಾಬರಾವ್ ಬೋರಸೆ, ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್, ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಚೇತನಕುಮಾರ್ ಎಂ.ಎನ್, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾ, ಇಲಾಖೆಯ ನಿರೂಪಣಾಧಿಕಾರಿ ಅನಿಲಕುಮಾರ್ ಹೆಗ್ಡೆ ಸೇರಿದಂತೆ ಗೃಹರಕ್ಷಕಿಯರು ಉಪಸ್ಥಿತರಿದ್ದರು.
***********
ಅಕ್ಕಪಡೆ ಏನಿದು? ಹೇಗೆ ಕಾರ್ಯನಿರ್ವಹಿಸುತ್ತೆ…..?
ಮಹಿಳೆಯರ ಸುರಕ್ಷತೆ ಹಾಗೂ ಸಬಲೀಕರಣವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ “ಅಕ್ಕ ಪಡೆ” ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಮಹತ್ವಾಕಾಂಕ್ಷಿಯ ಈ ಯೋಜನೆಯನ್ನು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗೃಹ ಇಲಾಖೆ ಸಂಯುಕ್ತವಾಗಿ ಆರಂಭಿಸಿವೆ.
ಈ ಯೋಜನೆಯಡಿ ಪ್ರತಿಯೊಂದು ಘಟಕಕ್ಕೆ ನಾಲ್ಕು ಮಹಿಳಾ ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಅಕ್ಕ ಪಡೆ ತಂಡಗಳು ಪೊಲೀಸ್ ಇನ್ಸ್‌ಪೆಕ್ಟರ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿವೆ.
ಅಕ್ಕ ಪಡೆ ಉದ್ದೇಶಗಳು : ಅಕ್ಕ ಪಡೆ ತಂಡದ ಮುಖ್ಯ ಉದ್ದೇಶಗಳು ಕೆಳಗಿನಂತಿವೆ:
ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳು, ವಿದ್ಯಾಸಂಸ್ಥೆಗಳು ಹಾಗೂ ಆನ್‌ಲೈನ್‌ನಲ್ಲಿ ಮಹಿಳೆಯರ ವಿರುದ್ಧ ನಡೆಯುವ ಕಿರುಕುಳ, ಹಿಂಬಾಲನೆ (ಸ್ಟಾಕಿಂಗ್) ಹಾಗೂ ಈವ್ ಟೀಸಿಂಗ್ ತಡೆಗಟ್ಟುವುದು.
ಗುಪ್ತ ನಿಗಾವಳಿ ಮೂಲಕ ಅಪರಾಧಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳುವುದು.
ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿ ತಕ್ಷಣ ದೂರು ನೀಡಲು ಪ್ರೋತ್ಸಾಹಿಸುವುದು.
ಸಣ್ಣ ಅಥವಾ ಮೊದಲ ಬಾರಿಗೆ ತಪ್ಪು ಮಾಡಿದವರನ್ನು ಅಗತ್ಯವಿದ್ದಲ್ಲಿ ಸಲಹೆ-ಮಾರ್ಗದರ್ಶನ ಮೂಲಕ ಸುಧಾರಿಸುವುದು.
ಶಾಲೆಗಳು, ಕಾಲೇಜುಗಳು ಹಾಗೂ ಕೆಲಸದ ಸ್ಥಳಗಳಲ್ಲಿ ಜಾಗೃತಿ ಮತ್ತು ಆತ್ಮರಕ್ಷಣೆ ಕಾರ್ಯಕ್ರಮಗಳನ್ನು ನಡೆಸುವುದು.
ಅಕ್ಕ ಪಡೆ ಸದಸ್ಯರಿಗೆ ಕೆಳಗಿನ ವಿಷಯಗಳಲ್ಲಿ ವಿಶೇಷ ತರಬೇತಿ ನೀಡಲಾಗಿದೆ:
·ಲಿಂಗ ಸಂವೇದನೆ ಹಾಗೂ ಕಾನೂನು ಅರಿವು
· ಕ್ಷೇತ್ರ ಕಣ್ಗಾವಲು ಮತ್ತು ನಿಗಾವಳಿ ವಿಧಾನಗಳು
· ಸಂವಹನ ಮತ್ತು ಸಲಹಾ ಕೌಶಲ್ಯಗಳು
· ಸೈಬರ್ ಸುರಕ್ಷತೆ ಅರಿವು
· ದಾಖಲೆ ನಿರ್ವಹಣೆ ಹಾಗೂ ಪ್ರಕರಣ ನಿರ್ವಹಣೆ
ಕ್ಷೇತ್ರ ಮಟ್ಟದ ಕಾರ್ಯಗಳು
ಅಕ್ಕ ಪಡೆ ತಂಡಗಳು ಪ್ರತಿದಿನ ಶಾಲೆಗಳು, ಕಾಲೇಜುಗಳು, ಬಸ್ ನಿಲ್ದಾಣಗಳು, ಮಾರುಕಟ್ಟೆಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಕೆಳಗಿನ ಜಾಗೃತಿ ಕಾರ್ಯಗಳನ್ನು ನಡೆಸಲಿವೆ:
· ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು.
· ಸೈಬರ್ ಅಪರಾಧ ತಡೆ ಕುರಿತು ಮಾಹಿತಿ ನೀಡುವುದು.
· ಮಹಿಳೆಯರಿಗೆ ಲಭ್ಯವಿರುವ ಸುರಕ್ಷತಾ ವ್ಯವಸ್ಥೆಗಳು ಹಾಗೂ ದೂರು ನೀಡುವ ವಿಧಾನಗಳನ್ನು ತಿಳಿಸುವುದು.
· ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು.
· ಮೂಲಭೂತ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವುದು.
ಹಲ್ಲೆ ಅಥವಾ ಕಿರುಕುಳ ಘಟನೆಗಳನ್ನು ಪತ್ತೆಹಚ್ಚಲು ಅಗತ್ಯವಿದ್ದಲ್ಲಿ ತಂಡದ ಸದಸ್ಯರು ಗುಪ್ತ ಕ್ಯಾಮೆರಾ ಸೇರಿದಂತೆ ಸೂಕ್ತ ನಿಗಾವಳಿ ಸಾಧನಗಳನ್ನು ಬಳಸಿಕೊಂಡು ಸಾಕ್ಷ್ಯ ಸಂಗ್ರಹಿಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ಅಕ್ಕ ಮಹಿಳಾ ಸಹಾಯವಾಣಿ (ವಾಟ್ಸಾಪ್ ಸೇವೆ)
ಮಹಿಳೆಯರು ಹಾಗೂ ಬಾಲಕಿಯರಿಗೆ ಆನ್‌ಲೈನ್ ನೆರವು ನೀಡಲು ಅಕ್ಕ ಸಹಾಯವಾಣಿ ವಾಟ್ಸಾಪ್ ಸಂಖ್ಯೆ – 8277951185
ಪ್ರಾರಂಭಿಸಲಾಗಿದೆ.
ಈ ಸಂಖ್ಯೆಯ ಮೂಲಕ ಕೆಳಗಿನ ಸೇವೆಗಳು ಲಭ್ಯವಿರುತ್ತವೆ:
· ಕಾನೂನು ಸಲಹೆ ಮತ್ತು ಮಾರ್ಗದರ್ಶನ
· ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳ ಮಾಹಿತಿ
· ಮಾನಸಿಕ ಸಲಹೆ (Psychological counselling)
· ಸೈಬರ್ ಅಪರಾಧ ಸಂಬಂಧಿತ ಸಲಹೆ
ಸಾರಾಂಶ : ಅಕ್ಕ ಪಡೆ ಹಾಗೂ ಅಕ್ಕ ಸಹಾಯವಾಣಿ ಆರಂಭವು ಬೆಳಗಾವಿಯಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸಲು ಕೈಗೊಳ್ಳಲಾದ ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಯ ಮೂಲಕ ಪೊಲೀಸ್ ಇಲಾಖೆಯು ತಳ ಮಟ್ಟದಲ್ಲಿಯೂ ಹಾಗೂ ಡಿಜಿಟಲ್ ಮೂಲಕವೂ ಮಹಿಳೆಯರೊಂದಿಗೆ ಸಂಪರ್ಕ ಸಾಧಿಸಿ ಅವರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಬದ್ಧವಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ತಿಳಿಸಿದ್ದಾರೆ.


