ಬೆಳಗಾವಿ ಲೋಕಸಭಾ ಕ್ಷೇತ್ರ ಯಾರ ಮಡಿಲಿಗೆ…? ಏನು ಹೇಳುತ್ತದೆ ಬಿಜೆಪಿ ಆಂತರಿಕ ಸಮೀಕ್ಷೆ
ಬೆಳಗಾವಿ : ಬರುವ ಜೂನ್ 4 ರ ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ಕೋಟ್ಯಾಂತರ ಜನರ ಕಣ್ಣು ನೆಟ್ಟಿದೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಚರ್ಚೆ ಎಲ್ಲೆಡೆ ಜೋರಾಗಿವೆ. ಈ ಮಧ್ಯೆ ಬೆಳಗಾವಿ ಲೋಕಸಭಾ ಕ್ಷೇತ್ರ ಗೆಲ್ಲುವರು ಯಾರು ಹಾಗೆಯೆ ಬಿಜೆಪಿ ಆಂತರಿಕ ಸಮೀಕ್ಷೆ ಏನು ಹೇಳುತ್ತದೆ ಎಂಬುದರ ವಿಶೇಷ ವರದಿ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹೊಸಬರು ಹಾಗೂ ಹಳಬರ ನಡುವಿನ ಯುದ್ಧ ಎಂದರೆ ತಪ್ಪಾಗಲಾರದು. ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡಿದ್ದರೆ ಕಾಂಗ್ರೆಸ್ ನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕಣಕ್ಕೆ ಇಳಿದಿದ್ದಾರೆ. ಇಬ್ಬರು ಅಭ್ಯರ್ಥಿಗಳು ಕೊನೆಯ ಕ್ಷಣದವರೆಗಿನ ಪೈಪೋಟಿ ನಡೆಸಿದ್ದು ಸಮಬಲದ ಹೋರಾಟದಲ್ಲಿದ್ದಾರೆ.
ಅಪಾರ ರಾಜಕೀಯ ಅನುಭವ ಹೊಂದಿರುವ ಜಗದೀಶ್ ಶೆಟ್ಟರ್ ಅವರು ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸಾಕಷ್ಟು ತಂತ್ರಗಾರಿಕೆ ಹೆಣೆಯುವ ಮೂಲಕ ತಮ್ಮ ವಿರುದ್ಧ ಇದ್ದ ಅಸಮಾಧಾನವನ್ನು ತಣಿಸುವ ಕೆಲಸ ಮಾಡುವಲ್ಲಿ ಯಶಸ್ವಿಯಾದರು. ಜೊತೆಗೆ ಈ ಬಾರಿ ಮರಾಠಾ ಸಮುದಾಯದ ಮತಗಳು ಹಾಗೂ ಲಿಂಗಾಯತ ಸಮುದಾಯ ತಮ್ಮ ಬೆನ್ನಿಗೆ ನಿಂತಿದೆ ಎಂಬ ವಿಶ್ವಾಸದಲ್ಲಿದ್ದಾರೆ.
ಸಾಮಾನ್ಯವಾಗಿ ಬಿಜೆಪಿಗೆ ಬೆಳಗಾವಿ ದಕ್ಷಿಣ, ಗೋಕಾಕ್, ಅರಭಾವಿ, ಬೈಲಹೊಂಗಲ ಹಾಗೂ ಬೆಳಗಾವಿ ಉತ್ತರ ಕ್ಷೇತ್ರ ಕೈ ಹಿಡಿಯುತ್ತವೆ ಎಂಬ ಲೆಕ್ಕಾಚಾರ ಕಮಲ ನಾಯಕರದ್ದು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅಲೆ ಮತ್ತು ಹಿಂದುತ್ವದ ಸಂಘಟನಾ ಶಕ್ತಿ ಹೊಂದಿರುವ ಫಲವಾಗಿ ಈ ಬಾರಿಯೂ ಬೆಳಗಾವಿ ಗೆಲ್ಲುವ ಆತ್ಮವಿಶ್ವಾಸದಲ್ಲಿ ಅನೇಕರಿದ್ದಾರೆ.
ಕೈ ಗೆ ‘ಗೃಹ’ ಲಕ್ಷ್ಮೀ ಬಲ : ಹಿಂದೆಂದಿಗಿಂತಲೂ ಅತ್ಯಂತ ಕ್ರಿಯಾತ್ಮಕವಾಗಿ ಸಚಿವೆ ಹೆಬ್ಬಾಳ್ಕರ್ ಮಗನ ಚುನಾವಣೆ ಮಾಡಿರುವುದರಲ್ಲಿ ಎರಡು ಮಾತಿಲ್ಲ. ಟಿಕೆಟ್ ಘೋಷಣೆ ಮುಂಚಿತವಾಗಿಯೇ ಕಾರ್ಯಕರ್ತರ ಸಂಘಟನೆ ಮೂಲಕ ಕ್ಷೇತ್ರದ ತುಂಬಾ ಓಡಾಟ ನಡೆಸಿರುವ ಇವರು ಈ ಬಾರಿ ಗೆಲ್ಲುವ ಆತ್ಮವಿಶ್ವಾಸದಲ್ಲಿರುವುದು ಸತ್ಯ.
ಕಾಂಗ್ರೆಸ್ ಸರ್ಕಾರದ ಬಲ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವರ್ಚಸ್ಸಿನ ಕಾರಣದಿಂದ ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅದ್ಬುತ ಪ್ರದರ್ಶನ ತೋರಿದೆ. ಜಗದೀಶ್ ಶೆಟ್ಟರ್ ಅವರಂತಹ ಅನುಭವಿ ರಾಜಕಾರಣಿಯ ವಿರುದ್ಧ ಅತ್ಯಂತ ಎಚ್ಚರಿಕೆ ನಡೆ ಇಡುವ ಮೂಲಕ ಹೆಬ್ಬಾಳ್ಕರ್ ಚುನಾವಣೆ ಎದುರಿಸಿದ್ದು ಸ್ಪಷ್ಟವಾಗಿ ತಿಳಿಯುತ್ತದೆ.
ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನಾತ್ಮಕವಾಗಿ ಕೆಲಸ ನಿರ್ವಹಿಸಿದೆ. ಆದರೆ ಬಿಜೆಪಿ ಕಾರ್ಯಕರ್ತರರಲ್ಲಿ ಈ ಉತ್ಸಾಹ ಕಾಣಲಿಲ್ಲ. ಗ್ರಾಮೀಣ ಭಾಗದ ಮಹಿಳೆಯರ ಮತಗಳನ್ನು ಪಡೆಯಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿತ್ತು, ಸಧ್ಯ ಅದರ ಫಲ ಲಭಿಸಿದಂತೆ ಮೇಲ್ನೋಟಕ್ಕೆ ಕಾಣಸಿಗುತ್ತದೆ.
ಈ ಬಾರಿ ಬಿಜೆಪಿ ಟಿಕೆಟ್ ಹಂಚಿಕೆ ಗೊಂದಲದ ಪರಿಣಾಮ ನಿರ್ಣಾಯಕ ಮತಗಳು ಕಾಂಗ್ರೆಸ್ ಪರ ವಾಲಿದಂತೆ ಕಂಡುಬರುತ್ತಿವೆ. ಆದರೆ ಎರಡೂ ಪಕ್ಷಗಳು ನೇರ ಹಾಗೂ ಸಮಬಲದ ಹೋರಾಟದಲ್ಲಿ ಇರುವುದು ನಿಶ್ಚಿತ. ಒಟ್ಟಾರೆಯಾಗಿ ಎರಡೂ ಪಕ್ಷಗಳಿಗೆ ಗೆಲುವಿನ ಹಾರ ಹಾಕಿಕೊಳ್ಳುವ ಅವಕಾಶ ಇರುವುದಂತು ಸ್ಪಷ್ಟವಾಗಿದ್ದರು ಒಂದು ಹೆಜ್ಜೆ ಬಿಜೆಪಿ ಮುಂದೆ ಇರುವುದಂತು ಪ್ರಸ್ತುತ ಚಿತ್ರಣ.
ಬಿಜೆಪಿ ನಡೆಸಿರುವ ಆಂತರಿಕ ಸರ್ವೇ ಪ್ರಕಾರ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿಗೆ ಅವಕಾಶ ಕಡಿಮೆ ಇದ್ದಂತೆ ಇದೆ ಎಂಬ ಅಂಶ ಬೆಳಿಕಿಗೆ ಬಂದಿದೆ. ಇನ್ನೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ನಡುವೆ ಸಮಬಲದ ಪೈಪೋಟಿ ಇದ್ದು, ಯಾರ ಗೆಲುವು ಎಂದು ಹೇಳುವುದು ಕಷ್ಟ ಎನ್ನುತ್ತವೆ ಬಿಜೆಪಿ ಮೂಲಗಳು. ಒಟ್ಟಿನಲ್ಲಿ ಬೆಳಗಾವಿಯ ಎರಡೂ ಕ್ಷೇತ್ರಗಳು ಸಂಚಲನ ಹುಟ್ಟು ಹಾಕಿದ್ದು ಸುಳ್ಳಲ್ಲ.


