ಭೋಪಾಲ್‌: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ಹಣಕಾಸು ನೆರವು ಸೇರಿ ಪಂಚ ನ್ಯಾಯಗಳ ತತ್ವದಲ್ಲಿ ಕಾಂಗ್ರೆಸ್‌ ಪ್ರಾಣಾಳಿಕೆ ಬಿಡುಗಡೆ ಮಾಡಿದೆ.

ಒಂದೊಂದು ನ್ಯಾಯ ತತ್ವವೂ ಐದೈದು ಭರವಸೆ ಹೊಂದಿದೆ. ಅಲ್ಲಿಗೆ ಕಾಂಗ್ರೆಸ್‌ 25 ಭರವಸೆಗಳನ್ನು ನೀಡಿದಂತಾಗಿದೆ. ಇನ್ನು, ಇದೇ ಪ್ರಣಾಳಿಕೆಯ ಭರವಸೆಯನ್ನು ಇಟ್ಟುಕೊಂಡು ಮಧ್ಯಪ್ರದೇಶ ಕಾಂಗ್ರೆಸ್‌ ನಾಯಕ ಕಾಂತಿಲಾಲ್‌ ಭುರಿಯಾ ನೀಡಿರುವ ಹೇಳಿಕೆಯು ಟೀಕೆಗೆ ಕಾರಣವಾಗಿದೆ. ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಒಬ್ಬ ವ್ಯಕ್ತಿಗೆ ಇಬ್ಬರು ಹೆಂಡತಿಯರು ಇದ್ದರೆ, ಆ ಕುಟುಂಬಕ್ಕೆ 2 ಲಕ್ಷ ರೂ. ನೀಡಲಾಗುವುದು’ ಎಂದಿದ್ದಾರೆ.

ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಕಾಂತಿಲಾಲ್‌ ಭುರಿಯಾ, ‘ದೇಶದ ಮಹಿಳೆಯರಿಗಾಗಿ ಕಾಂಗ್ರೆಸ್‌ ಭರ್ಜರಿ ಘೋಷಣೆ ಮಾಡಿದೆ. ಮಹಾಲಕ್ಷ್ಮೀ ಯೋಜನೆ ಅಡಿಯಲ್ಲಿ ಒಬ್ಬ ಮಹಿಳೆಯು ವರ್ಷಕ್ಕೆ 1 ಲಕ್ಷ ರೂ. ಪಡೆಯಲಿದ್ದಾರೆ.

ನೇರವಾಗಿ ಅವರ ಖಾತೆಗೆ ಹಣ ಜಮೆಯಾಗಲಿದೆ. ಇನ್ನು, ಒಬ್ಬ ವ್ಯಕ್ತಿಗೆ ಇಬ್ಬರು ಹೆಂಡತಿಯರು ಇದ್ದರೆ, ಅವರಿಗೆ ಎರಡು ಲಕ್ಷ ರೂ. ಸಿಗಲಿದೆ’ ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿಯು ತಿರುಗೇಟು ನೀಡಿದೆ.

ಕಾಂತಿಲಾಲ್‌ ಭುರಿಯಾ ಹೇಳಿಕೆಗೆ ಬಿಜೆಪಿ ವಕ್ತಾರ ನರೇಂದ್ರ ಸಲುಜಾ ತಿರುಗೇಟು ನೀಡಿದ್ದಾರೆ. ‘ಇಂತಹ ಹೇಳಿಕೆ ನೀಡಿರುವ ಕಾಂತಿಲಾಲ್‌ ಭುರಿಯಾ ವಿರುದ್ಧ ಚುನಾವಣೆ ಆಯೋಗವು ಕ್ರಮ ತೆಗೆದುಕೊಳ್ಳಬೇಕು.

ದೇಶದ ನಾಯಕ, ಎರಡೆರಡು ಮದುವೆ, ಬೆತ್ತಲೆ ಸೇರಿ ಹಲವು ವಿಷಯಗಳ ಕುರಿತು ಇವರು ನೀಡಿದ ಹೇಳಿಕೆಗಳು ಆಕ್ಷೇಪಾರ್ಹವಾಗಿವೆ’ ಎಂದು ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.