ಬೆಳಗಾವಿಗೆ ಶೆಟ್ಟರ್ ; ಚಿಕ್ಕೋಡಿಗೆ ಕತ್ತಿ ಸಾಹುಕಾರ…..? ಏನಿದು ಬಿಜೆಪಿ ಹೊಸ ಲೆಕ್ಕಾಚಾರ…!
ಬೆಳಗಾವಿ : ಲೋಕಸಭಾ ಚುನಾವಣೆ ಬಿಸಿ ಏರತೊಡಗಿದ್ದು ದಿನ ಕಳೆದಂತೆ ವಿಭಿನ್ನ ಲೆಕ್ಕಾಚಾರ ಹೊರಬರುತ್ತಿವೆ. ಈ ನಡುವೆ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್ ಯಾರಿಗೆ ಎಂಬ ಚರ್ಚೆ ಜೋರಾಗಿದೆ.
ಸಧ್ಯ ಮೂಲಗಳ ಪ್ರಕಾರ ಬೆಳಗಾವಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅದವರನ್ನೇ ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾಂಗ್ರೆಸ್ ಸೇರಿ ಬಿಜೆಪಿಗೆ ಹೊಡೆತ ನೀಡಿದ್ದ ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ನೀಡುವ ಕುರಿತು ಮಾತುಕತೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಹಾಲಿ ಸಂಸದೆ ಮಂಗಳಾ ಅಂಗಡಿ ಬದಲಿಗೆ ಈ ಬಾರಿ ಅನೇಕರು ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದರು. ಇದರಲ್ಲಿ ಮುಖ್ಯವಾಗಿ ಈರಣ್ಣ ಕಡಾಡಿ ಹಾಗೂ ಮಹಾಂತೇಶ್ ಕವಠಗಿಮಠ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಬಿಜೆಪಿ ಹೈಕಮಾಂಡ್ ಜಗದೀಶ್ ಶೆಟ್ಟರ್ ಅವರಿಗೆ ಅವಕಾಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ಕೈ ತಪ್ಪುವ ಭೀತಿ ಇದೆ. ಮಾಜಿ ಸಂಸದ ಹಾಗೂ ದಿ. ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ದಟ್ಟವಾಗಿದೆ.
ಈ ಹಿಂದಿನಿಂದಲೂ ಮಾಜಿ ಸಿಎಂ ಯಡಿಯೂರಪ್ಪ ರಮೇಶ್ ಕತ್ತಿ ಅವರಿಗೆ ಅವಕಾಶ ಕಲ್ಪಿಸುವ ಕುರಿತು ಮಾತು ಕೊಟ್ಟಿದ್ದರು. ಅದರಂತೆ ಈ ಬಾರಿ ಚಿಕ್ಕೋಡಿ ಟಿಕೆಟ್ ಕೊಡಿಸುವ ಕುರಿತು ಹೈಕಮಾಂಡ್ ಮಟ್ಟದಲ್ಲಿ ಯಡಿಯೂರಪ್ಪ ಒತ್ತಡ ಮುಂದುವರಿಸಿದ್ದಾರೆ.
ಸಂಸದ ಅಣ್ಣಾಸಾಹೇಬ್ ಜೊಲ್ಲೆ ಕುರಿತು ಚಿಕ್ಕೋಡಿ ಕ್ಷೇತ್ರದಲ್ಲಿ ಜನರ ಅಭಿಪ್ರಾಯ ಭಿನ್ನವಾಗಿದೆ. ಸಂಸದರ ಕಾರ್ಯವೈಖರಿ ಕುರಿತು ಜನ ಅಸಮಾಧಾನ ಹೊಂದಿದ್ದಾರೆ. ಈ ನಡುವೆ ರಮೇಶ್ ಕತ್ತಿ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹವೂ ಹೆಚ್ಚಾಗಿದ್ದು ಕೊನೆಗೂ ಚಿಕ್ಕೋಡಿಗೆ ಕತ್ತಿ ಸಾಹುಕಾರ್ ಫಿಕ್ಸ್ ಎನ್ನಲಾಗುತ್ತಿದೆ.

