ಶೀಘ್ರದಲ್ಲೇ ಸಾರಿಗೆ ಇಲಾಖೆಯಲ್ಲಿ 2 ಸಾವಿರ ಸಿಬ್ಬಂದಿ ನೇಮಕ
ಬೆಳಗಾವಿ : ರಾಜ್ಯದಲ್ಲಿ ನೂತನ ಬಸ್ ಗಳ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದ್ದು, 2 ಸಾವಿರಕ್ಕಿಂತಲೂ ಅಧಿಕ ವಾಹನ ಚಾಲಕರ ಹಾಗೂ ನಿರ್ವಾಹಕರ ಹುದ್ದೆಗಳ ಭರ್ತಿ ಪ್ರಕ್ರಿಯೆ ಕೂಡ ಚಾಲನೆಯಲ್ಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಗಾರೆಡ್ಡಿ ತಿಳಿಸಿದರು.
ಭಾನುವಾರ ನದರ ಕೇಂದ್ರ ಬಸ್ ನಿಲ್ದಾಣದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ಸುಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ ಇವರು.
ಈ ವರ್ಷ ಸುಮಾರು 700 ಕ್ಕೂ ಅಧಿಕ ಹೊಸ ಬಸ್ ಗಳ ಖರೀದಿ ಪ್ರಕ್ರಿಯೆ ನಡೆದಿದೆ. ಸಧ್ಯದಲ್ಲೇ 2 ಸಾವಿರಕ್ಕಿಂತಲೂ ಅಧಿಕ ವಾಹನ ಚಾಲಕರ ಹಾಗೂ ನಿರ್ವಾಹಕರ ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದರು.
ಅಪಘಾತಗಳಲ್ಲಿ ಮೃತರಾದ ಬಸ್ ಚಾಲಕರಿಗೆ, ಕಂಡಕ್ಟರ್ ಗಳ ವಾರಸುದಾರರಿಗೆ 50 ಲಕ್ಷ ರೂಪಾಯಿ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಪರಿಹಾರ ಧನವನ್ನು 1 ಕೋಟಿಗೆ ಹೆಚ್ಚಿಸುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮಳೆ, ಚಳಿ, ಬಿಸಿಲು ಏನೇ ಇದ್ದರೂ ಸಾರ್ವಜನಿಕರ ಸೇವೆಗೆ ಸಾರಿಗೆ ಇಲಾಖೆಯ ನೌಕರರು ಸದಾ ಶ್ರಮಿಸುತ್ತಿದ್ದಾರೆ. ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಸೇವಾ ಮನೋಭಾವದ ಹಿಂದೆ ನಿಮ್ಮ ಕುಟುಂಬದ ತ್ಯಾಗ ಬಹಳಷ್ಟಿದೆ ಎಂದು ಹೇಳಿದರು.


