ಬೆಳಗಾವಿ ಇಬ್ಬರು ನಾಯಕರಿಗೆ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಹುದ್ದೆ
ಬೆಳಗಾವಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಗಿದ್ದ ಕೆಲ ತಪ್ಪುಗಳನ್ನು ಬಿಜೆಪಿ ಸರಿಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಂತೆ ಕಾಣುತ್ತಿದೆ. ಬೆಳಗಾವಿಯ ಇಬ್ಬರು ನಾಯಕರಿಗೆ ಸಧ್ಯ ರಾಜ್ಯ ಬಿಜೆಪಿ ಘಟಕದಲ್ಲಿ ಮಹತ್ವದ ಸ್ಥಾನ ನೀಡಲಾಗಿದ್ದು, ಪಕ್ಷ ಸಂಘಟನೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾಗಿದ್ದ ಅನಿಲ್ ಬೆನಕೆ ಅವರಿಗೆ ಟಿಕೆಟ್ ನಿರಾಕರಿಸಿ ಬೆರೆಯವರಿಗೆ ನೀಡಲಾಗಿತ್ತು. ಗೆಲ್ಲುವ ಕ್ಷೇತ್ರದಲ್ಲೇ ಬಿಜೆಪಿ ಅವೈಜ್ಞಾನಿಕ ಸಮೀಕರಣದ ಫಲವಾಗಿ ಕಾಂಗ್ರೆಸ್ ಅಭ್ಯರ್ಥಿ ನಿರಾಯಾಸವಾಗಿ ಗೆಲುವು ಸಾಧಿಸಿದ್ದರು. ಆದರೆ ವಿಜಯೇಂದ್ರ ಅವರು ಮಾಜಿ ಶಾಸಕ ಅನಿಲ್ ಬೆನಕೆ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡುವ ಮೂಲಕ ಬೆನ್ನಿಗೆ ನಿಂತಿದ್ದಾರೆ.
ಇನ್ನೂ ಕುಡಚಿ ಮತಕ್ಷೇತ್ರದ ಮಾಜಿ ಶಾಸಕ ಪಿ. ರಾಜೀವ್ ಅವರ ಸಂಘಟನಾ ಕೌಶಲ್ಯ ಮತ್ತು ಮಾತುಗಾರಿಕೆ ಕಾರಣ ಸಧ್ಯ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕಡಿಮೆ ಅಂತರದ ಸೋಲು ಕಂಡಿದ್ದ ಪಿ. ರಾಜೀವ್ ಅವರಿಗೆ ಹೈಕಮಾಂಡ್ ಉತ್ತಮ ಹುದ್ದೆ ನೀಡಿದೆ.

