ನಮ್ಮ ಶಾಸಕರಿಗೆ ಊರಲ್ಲಿ 50 ಮತ ಬಿದ್ದಿಲ್ಲ ಇನ್ನೂ ಗೆಲ್ಲೋದು ಎಲ್ಲಿಂದ ; ಮಾಜಿ ಸಿಎಂ ಕಮಲನಾಥ್
ಭೋಪಾಲ್ : ನಮ್ಮ ಮಾಜಿ ಶಾಸಕರಿಗೆ ಅವರ ಊರಿನಲ್ಲಿ 50 ಮತಗಳು ಬಿದ್ದಿಲ್ಲ, ನಾವು ಗೆಲ್ಲೋದು ಹೇಗೆ ಎಂದು ಮಧ್ಯ ಪ್ರದೇಶ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಹೇಳಿದ್ದಾರೆ. ತಮ್ಮ ಊರುಗಳಲ್ಲಿ 50 ಮತಗಳು ಕೂಡ ಬಿದ್ದಿಲ್ಲ ಎಂದು ಮಾಜಿ ಶಾಸಕರು ಕಮಲ್ ನಾಥ ಅವರಿಗೆ ತಿಳಿಸಿದ್ದಾರೆ.
ಮಧ್ಯ ಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ಕಮಲ್ ನಾಥ್ ಅವರು, ಚುನಾವಣಾ ಅಕ್ರಮ ನಡೆದಿದೆ ಎಂದೇನೂ ಆರೋಪಿಸಲಿಲ್ಲ. ಆದರೆ, ಮತ್ತೊಂದೆಡೆ, ದಿಗ್ವಿಜಯ್ ಸಿಂಗ್ ವರು ವಿದ್ಯುನ್ಮಾನ ಮತಯಯಂತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.
ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಎರಡು ದಿನಗಳ ನಂತರ ಈ ಹೇಳಿಕೆಗಳು ಬಂದಿವೆ. ತೆಲಂಗಾಣದಲ್ಲಿ ಕಾಂಗ್ರೆಸ್ ತನ್ನ ಏಕೈಕ ಗೆಲುವಿನಲ್ಲಿ ಸಮಾಧಾನ ಕಂಡು ಕೊಳ್ಳಬೇಕಾಯಿತು. ಮಧ್ಯ ಪ್ರದೇಶದಲ್ಲಿ 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ 66 ಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮಧ್ಯಪ್ರದೇಶದಲ್ಲಿ ಸಮಬಲ ಸ್ಪರ್ಧೆ ನಡೆಯಲಿದೆ ಎಂದು ಎಕ್ಸಿಟ್ ಪೋಲ್‌ಗಳ ಊಹೆ ಕೂಡ ಸುಳ್ಳಾಯಿತು.
ಕಾಂಗ್ರೆಸ್‌ನ ಪ್ರಚಾರದ ನೇತೃತ್ವ ವಹಿಸಿರುವ ಕಮಲ್ ನಾಥ್, ಪಕ್ಷದ ಕಳಪೆ ಪ್ರದರ್ಶನದ ಹಿಂದಿನ ಕಾರಣಗಳನ್ನು ವಿಶ್ಲೇಷಿಸಲು ಪಕ್ಷದ ಜತೆ ಚರ್ಚಿಸಲಾಗುವುದು. ಈ ಕುರಿತು ಗೆದ್ದ ಮತ್ತು ಸೋತ ಅಭ್ಯರ್ಥಿಗಳ ಜತೆ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕೆಲವು ಕಾಂಗ್ರೆಸ್ ನಾಯಕು ಇವಿಎಂ ಹ್ಯಾಕ್ ಬಗ್ಗೆ ಆರೋಪಿಸುತ್ತಿದ್ದಾರೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕಮಲ್ ನಾಥ್ ಅವರು, ಚರ್ಚೆ ನಡೆಸದೆ ತೀರ್ಮಾನಕ್ಕೆ ಬರುವುದು ಸರಿಯಲ್ಲ, ನಾನು ಮೊದಲು ಎಲ್ಲರೊಂದಿಗೆ ಮಾತನಾಡುತ್ತೇನೆ. ಆ ಮೇಲೆ ಈ ಬಗ್ಗೆ ನಿರ್ಧರಿಸುತ್ತೇನೆ ಎಂದು ಹೇಳಿದರು.


