ನೀರಾವರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಶೀಘ್ರದಲ್ಲೇ ಭರ್ತಿ : ಡಿ.ಕೆ ಶಿವಕುಮಾರ್
ಬೆಳಗಾವಿ : ನೀರಾವರಿ ಇಲಾಖೆಯ ಹುದ್ದೆಗಳ ನೇಮಕಾತಿ ಸಮಸ್ಯೆ ಇದೆ. ಒಟ್ಟು 1322 ಹುದ್ದೆಗಳು ಮಂಜೂರಾಗಿದ್ದು, 671 ಭರ್ತಿಯಾಗಿದ್ದು, 651 ಹುದ್ದೆಗಳು ಖಾಲಿ ಇವೆ. ಬೆಂಗಳೂರಿಗೆ ಹೋದ ಮೇಲೆ ಈ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳುತ್ತೇನೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.
ಬುಧವಾರ ವಿವಿಧ ನೀರಾವರಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಇವರು. ಘಟಪ್ರಭ, ಮಾರ್ಕಂಡೇಯ, ಹಿಪ್ಪರಗಿ, ಆಲಮಟ್ಟಿ ಜಲಾಶಯಗಳಲ್ಲಿ ಶೇ.90 ರಷ್ಟು ನೀರು ತುಂಬಿದೆ. ಮಲಪ್ರಭದಲ್ಲಿ ಮಾತ್ರ ಶೇ. 52ರಷ್ಟು ನೀರಿದ್ದು ಮುಂಬರುವ ಪರಿಸ್ಥಿತಿ ನೋಡಿಕೊಂಡು ನೀರಿನ ಬಳಕೆಗೆ ಸೂಚನೆ ನೀಡಿದರು.
ಯಾವ ಕಾಮಗಾರಿಗಳನ್ನು ಉಳಿಸಿಕೊಳ್ಳಬೇಕು, ಯಾವ ಅನಗತ್ಯ ಕಾಮಗಾರಿಗಳನ್ನು ಕೈಬಿಡಬೇಕು ಎಂಬುದರ ಬಗ್ಗೆ ಸಭೆ ಮಾಡಿ ತೀರ್ಮಾನಿಸುತ್ತೇವೆ. ನೀರು ಬಳಕೆದಾರರ ಸಂಘದ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ.
ಮುಂದಿನ ನೂರು ದಿನಗಳಲ್ಲಿ ಎಲ್ಲಾ ಕಡೆ ನೀರು ಬಳಕೆದಾರರ ಸಂಘ ಸ್ಥಾಪನೆಯಾಗಬೇಕು ಎಂದು ಕಾಡಾ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಈ ಮೂಲಕ ಸೂಚನೆ ನೀಡುತಿದ್ದೇನೆ ಎಂದರು.
ಕೆನಾಲ್ ರಿಪೇರಿ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಜೊತೆ ಮಾತನಾಡುತ್ತೇವೆ. ನರೇಗಾ ಮೂಲಕ ಸ್ಥಳೀಯರ ಮೂಲಕ ಕಾಮಗಾರಿಗಳನ್ನು ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಕಳಾಸಾ ಬಂಡೂರಿ ಯೋಜನೆ ಕುರಿತು ಕೇಂದ್ರ ಸರ್ಕಾರ ರಾಜ್ಯಗಳ ನಡುವೆ ಇರುವ ವ್ಯತ್ಯಾಸವನ್ನು ಸರಿಪಡಿಸಬೇಕು. ಈ ಬಗ್ಗೆ ಸಚಿವರ ಜತೆಯೂ ಚರ್ಚೆ ಮಾಡಿದ್ದೇವೆ. ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಈ ವಿಚಾರ ಹಿಂದುಳಿದಿದೆ.
ಮೇಕೆದಾಟು ಯೋಜನೆ ಆರಂಭಿಸಲು ಸುಪ್ರೀಂ ಕೋರ್ಟ್ ಮೆಟ್ಟಿಲೇರುವಂತೆ ಕಳಸಾ ಬಂಡೂರಿ ಯೋಜನೆಗೂ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ, ಶಾಸಕ ಮಹೇಂದ್ರ ತಮ್ಮಣ್ಣವರ ನೇರಿದಂತೆ ಅನೇಕರು ಉಪಸ್ಥಿತರಿದ್ದರು.


