
ನದಿ ನೀರು ಕಡಿಮೆ ಬಳಸಿ : ರೈತರಿಗೆ ಲಕ್ಷ್ಮಣ ಸವದಿ ಮನವಿ

ಅಥಣಿ : ರಾಜ್ಯದಲ್ಲಿ ಮುಂಗಾರು ಮಳೆಯ ಅಭಾವದಿಂದ ಬಹುತೇಕ ನದಿಗಳಲ್ಲಿ ನೀರಿನ ಕೊರತೆ ಇದೆ.ಬರಗಾಲದ ಈ ಸಂದರ್ಭದಲ್ಲಿ ರೈತರೂ ಕೂಡಾ ನದಿ ನೀರು ಪೋಲಾಗದಂತೆ ಕಾಳಜಿ ವಹಿಸುವುದು ಅಗತ್ಯ. ಬೇಸಿಗೆ ಕಾಲದಲ್ಲಿ ನೀರಿನ ಅಭಾವವಾಗದಂತೆ ಈಗಿನಿಂದಲೇ ನೀರನ್ನು ಹಿತಮಿತವಾಗಿ ಬಳಸುವಂತೆ ಶಾಸಕ ಲಕ್ಷ್ಮಣ ಸವದಿ ರೈತರಲ್ಲಿ ಮನವಿ ಮಾಡಿದರು.
ಅಥಣಿ ತಾಲೂಕಿನ ನಾಗನೂರ ಪಿಕೆ ಗ್ರಾಮದಲ್ಲಿ ದಸರಾ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ. ನಮ್ಮ ರಾಜ್ಯದಲ್ಲಿ ಗಾಳಿಯಿಂದ, ನೀರಿನಿಂದ, ಕಲ್ಲಿದ್ದಿಲಿನಿಂದ ಮತ್ತು ಸೋಲಾರ್ ಸೌಲಭ್ಯದಿಂದ ಹೀಗೆ ನಾಲ್ಕು ಹಂತದಲ್ಲಿ ವಿದ್ಯುತ್ ಶಕ್ತಿಯನ್ನು ಉತ್ಪಾದನೆ ಮಾಡಲಾಗುತ್ತದೆ.
ಆದರೆ ಇತ್ತೀಚಿನ ದಿನಮಾನಗಳಲ್ಲಿ ವಿದ್ಯುತ್ ಉತ್ಪಾದನಾ ವ್ಯವಸ್ಥೆಗಳಲ್ಲಿ ವ್ಯತರಿಕ್ತ ಪರಿಣಾಮ ಉಂಟಾಗುತ್ತಿರುವುದರಿಂದ ಸಹಜವಾಗಿ ವಿದ್ಯುತ್ ಕೊರತೆಯಾಗುತ್ತಿದೆ ಎಂದರು.
ಸರಿಯಾದ ಮಳೆ ಇಲ್ಲ ಇದೇ ರೀತಿ ಬರಗಾಲ ಮುಂದುವರೆದರೆ ಮಾರ್ಚ್ ಏಪ್ರಿಲ್ ವೇಳೆಗೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಬಹುದು. ನೆರೆಯ ಮಹಾರಾಷ್ಟ್ರದಲ್ಲಿಯೂ ಕೂಡ ಕೃಷ್ಣಾ ನದಿಗೆ 2 ಟಿಎಂಸಿ ನೀರಿನ ಕೊರತೆ ಇದೆ. ನಮ್ಮಲ್ಲಿರುವ 6 ಟಿಎಂಸಿ ನೀರಿನ್ನು ಬರುವ ಬೇಸಿಗೆ ಕಾಲದವರೆಗೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಮ್ಮ ರೈತರು ಮತ್ತು ಸಾರ್ವಜನಿಕರು ಸಹಕರಿಸುವುದು ಅಗತ್ಯ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ಸದಾಶಿವ ಬುಠಾಳಿ, ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.