ತವರು ನೆಲದಲ್ಲೇ ರಾಣಿ ಚನ್ನಮ್ಮನ ಮೂರ್ತಿಗಿಲ್ಲ ಜಾಗ ; ಪೊಲೀಸರಿಗೆ ಯಾಕಿಷ್ಟು ಕನ್ನಡಿಗರ ಮೇಲೆ ಸಿಟ್ಟು..?
ಬೆಳಗಾವಿ : ಬೆಳಗಾವಿ ಜಿಲ್ಲೆ ರಾಣಿ ಚನ್ನಮ್ಮ ತಾಯಿಯ ತವರು ನೆಲ. ಆದರೆ ಇದೇ ಕಿತ್ತೂರು ರಾಣಿ ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆಯಾದ ಕೆಲವೇ ಗಂಟೆಯಲ್ಲಿ ಪೊಲೀಸರು ತೆರವು ಮಾಡಿದ್ದು ಮಾತ್ರವಲ್ಲದೆ ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದಾರೆ.
ಮರಾಠಿ ಭಾಷಿಕರ ಪ್ರಾಭಲ್ಯವಿರುವ ಬೆಳಗಾವಿ ತಾಲೂಕಿನ ಧಾಮಣೆ ಗ್ರಾಮದಲ್ಲಿ ನಾಡಿನ ಸ್ವಾತಂತ್ರ್ಯ ಹೋರಾಟಗಾರಿಗೆ ನೆಲೆ ಇಲ್ಲದಂತಾಗಿದೆ. ಕಿತ್ತೂರು ರಾಣಿ ಚನ್ನಮ್ಮನ ಮೂರ್ತಿ ಪ್ರತಿಷ್ಠಾಪಿಸಿದ ದಿನವೇ ಪೊಲೀಸರು ತೆರವು ಮಾಡಿರುವಂತಹ ಅವಮಾನಕಾರಿ ಘಟನೆ ಸೋಮವಾರ ಜರುಗಿದೆ.
ಧಾಮಣೆ ಗ್ರಾಮದಲ್ಲಿ ಹಲವಾರು ಕನ್ನಡ ಭಾಷಿಕ ಮನೆತನಗಳಿದ್ದು ಕಳೆದ ಹಲವು ದಿನಗಳಿಂದ ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಗ್ರಾಮ ಪಂಚಾಯತಿಗೆ ಇಲ್ಲಿನ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಸಂಭಾಜೀ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಅವಕಾಶ ನೀಡಿದ್ದ ಇವರು ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನಿರಾಕರಿಸಿತ್ತು.
ಬೆಳಗಾವಿಯಲ್ಲಿ ಕನ್ನಡಪರ ಕೆಲಸಕ್ಕೆ ಧ್ವನಿ ಎತ್ತುವವರ ವಿರುದ್ಧ ಖಾಕಿ ನಿರಂತರವಾಗಿ ದರ್ಪ ಮೆರೆಯುತ್ತಾ ಬಂದಿದೆ. ಈ ಹಿಂದ ಕನ್ನಡ ಬಾವುಟ ವಿಚಾರವಾಗಿ ಪೊಲೀಸರು ಯುವಕರ ಮೇಲೆ ಹಲ್ಲೆ ಮಾಡಿದ್ದ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಮಾಡಿದ್ದ ಯುವರು ಹಾಗೂ ಮನೆಯ ಹಿರಿಯರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ ತನ್ನ ತಂದೆಯನ್ನು ರಕ್ಷಿಸಲು ಬಂದಿದ್ದ ಯುವತಿಯ ಮೇಲೆ ಖಾಕಿ ದರ್ಪ ಮೆರೆದಿದ್ದು ಸದ್ಯ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.


