ಬೆಳಗಾವಿ/ಯಾದಗಿರಿ : ಜನರ ಬಾಯಿಂದ ಬಾಯಿಗೆ ಹಬ್ಬಿದ ಸುಳ್ಳು ವದಂತಿಯಿಂದ ಸಾವಿರಾರು ಸಂಖ್ಯೆಯಲ್ಲಿ ಮಾತಂಗಿಯರು ಭೀಮಾ ನದಿಗೆ ಓಡೋಡಿ ಬಂದು ಸ್ನಾನ ಮಾಡಿ ಪೂಜೆ ನೆರವೇರಿಸಿದ್ದಾರೆ. ಇದರಿಂದ ಭೀಮಾ ನದಿ ಕಲುಷಿತಗೊಂಡ ಘಟನೆ ನಡೆದಿದೆ. Savadatti yalamma (  Sarpa dosha )

ಇಂತಹ ದಿಢೀರ್ ಆಚರಣೆ ಕಂಡು ಬಂದಿದ್ದು ಮಂಗಳವಾರ ಯಾದಗಿರಿ ಸಮೀಪದ ಭೀಮಾ ನದಿ ತೀರದ ಕಂಗಳೇಶ್ವರ ದೇವಸ್ಥಾನದ ಹತ್ತಿರ.ಅಧಿಕೃತ ಜಾತ್ರೆ, ಹಬ್ಬ, ಆಚರಣೆ ಇಲ್ಲದಿದ್ದರೂ ಬಾಯಿಂದ ಬಾಯಿಗೆ ಹರಡಿದ ಯಲ್ಲಮ್ಮನ ಸರ್ಪ ದೋಷ ವದಂತಿಯಿಂದಾಗಿ ನದಿ ತೀರದಲ್ಲಿ ಯಲ್ಲಮ್ಮನ ಭಕ್ತಗಣವೇ ಸೇರಿತ್ತು.

ಸವದತ್ತಿ ಯಲ್ಲಮ್ಮ ದೇವಿಗೆ ಸರ್ಪ ದೋಷ ತಗುಲಿದ್ದು, ಅದರ ನಿವಾರಣೆಗಾಗಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಹೊಸ ಪಾದ(ತಾಮ್ರದ ಚಿಕ್ಕ ಪಾದುಕೆ) ಧರಿಸಬೇಕು ಎಂಬ ಗಾಳಿಸುದ್ದಿಗೆ ಸಾವಿರಾರು ಮಾತಂಗಿಯರು ಕಿವಿಗೊಟ್ಟರು. ಬೆಂಗಳೂರಿಗೆ ಗುಳೆ ಹೋದವರೂ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಹತ್ತಾರು ಮಾತಂಗಿಯರು ದೇವಿ ಮೇಲಿನ ನಂಬಿಕೆಯಿಂದಾಗಿ ಒಂದೆಡೆ ಸೇರಿದ್ದಾರೆ.

ಕೆಲವರು ಬಸ್‌, ಖಾಸಗಿ ವಾಹನಗಳಲ್ಲಿ ಹಳೇ ಬಸ್‌ ನಿಲ್ದಾಣಕ್ಕೆ ಬಂದು, ಅಲ್ಲಿಂದ ಕಾಲ್ನಡಿಗೆಯಿಂದ ನದಿ ತೀರಕ್ಕೆ ತೆರಳಿದರು. ತಲೆಯ ಮೇಲೆ ಊಟದ ಬುತ್ತಿ, ಕೈಯಲ್ಲಿ ಪೂಜಾ ಸಾಮಗ್ರಿಗಳು, ಹೊಸ ಸೀರೆ ಹಿಡಿದುಕೊಂಡು ತಂಡೋಪ ತಂಡವಾಗಿ ಬಂದು ನದಿ ದಡದಲ್ಲಿ ಸೇರಿದರು. ಸಣ್ಣ–ಸಣ್ಣ ಬಂಡೆಗಲ್ಲು, ಹಾಸು ಬಂಡೆಗಳ ನಡುವೆ ಸಣ್ಣದಾಗಿ ಹರಿಯುತ್ತಿದ್ದ ಭೀಮಾ ನದಿಯಲ್ಲಿ ಮಿಂದರು. ಯಲ್ಲಮ್ಮ ದೇವಿಯನ್ನು ನೆನೆದು ಗಂಗಾ ಮಾತೆಗೆ ಕೈಮುಗಿದು ಪುಣ್ಯಸ್ನಾನ ಮಾಡಿದರು.

ಸ್ನಾನದ ವೇಳೆ ಧರಿಸಿದ್ದ ಬಟ್ಟೆಯನ್ನು ನದಿಯ ದಡದಲ್ಲಿಯೇ ಬಿಟ್ಟು ಹೊಸ ಸೀರೆಯನ್ನು ತೊಟ್ಟರು. ಕೆಲವರು ಹಳೇ ಪಾದುಕೆಗಳನ್ನು ನದಿ ನೀರಲ್ಲಿ ಬಿಟ್ಟರೆ ಕೆಲವರು ಹುತ್ತದಲ್ಲಿ ಹಾಕಲು ಜೋಪಾನವಾಗಿ ಇರಿಸಿಕೊಂಡರು. ಸ್ನಾನದ ಬಳಿಕ ಕಲ್ಲುಬಂಡೆಗಳ ಮೇಲೆ ಹಣತೆಯಲ್ಲಿ ದೀಪ ಹಚ್ಚಿ, ಹೂವು– ಹಣ್ಣುಗಳನ್ನು ಇರಿಸಿ ಪೂಜೆ ಸಲ್ಲಿಸಿದರು. ದಡದಲ್ಲಿನ ದೇವಸ್ಥಾನಗಳ ಮುಂದೆಯೂ ಪೂಜೆ ಮಾಡಿದರು. ನಂತರ ತೆಂಗಿನ ಕಾಯಿ ಒಡೆದು ತೀರಕ್ಕೆ ಬಂದರು.

ಹೊಸದಾಗಿ ತಂದಿದ್ದ ಪಾದುಕೆಗಳಿಗೆ ಪೂಜೆ ಸಲ್ಲಿಸಿ, ಭಂಡಾರ ಹಚ್ಚಿದರು. ಹೊಸ ದಾರದಲ್ಲಿ ಪಾದುಕಗಳನ್ನು ಪೋಣಿಸಿದರು. ಯಲ್ಲಮ್ಮ ತಾಯಿಯ ಸ್ಮರಿಸುತ್ತಾ ಜೋಗತಿಯರ ಯಲ್ಲಮ್ಮನ ಆರಾಧನೆಯ ‘ಯಾಕ್ಲಿಗೆ ಜೋ ಯಾಕ್ಲಿಗೆ’ ಹಾಡಿನೊಂದಿಗೆ ಹೊಸ ಪಾದುಕೆ ಧರಿಸಿದರು.

ಸರ್ಪ ದೋಷ ದೂರಾಗಿ, ತಾಯಿಯನ್ನು ಆರಾಧಿಸುವ ಭಕ್ತರನ್ನು ರಕ್ಷಿಸು. ಬರಗಾಲದ ಸಂಕಷ್ಟಕ್ಕೆ ಸಿಲುಕಿದ ಭೂತಾಯಿ ಮಕ್ಕಳಿಗೆ ಒಳ್ಳೆಯದ್ದು ಮಾಡುವಂತೆ ಯಲ್ಲಮ್ಮನಲ್ಲಿ ಬೇಡಿಕೆ ಕೊಂಡಿದ್ದೇವೆ ಎಂದು ರಾಮಸಮುದ್ರದ ಮಾತಂಗಿ ಸಾಬಮ್ಮ ಹೇಳಿದರು.
‘ಯಲ್ಲಮ್ಮ ದೇವಿಯ ಪಾದುಕೆಯನ್ನು ಹಾವು ನುಂಗಿದೆ, ಮಾತಂಗಿಯರು ಹೊಳೆ ಸ್ನಾನ ಮಾಡಿ ಪೂಜೆ ಮಾಡಬೇಕು ಎಂದು ನಮ್ಮೂರು ಮಾತ್ರವಲ್ಲದೇ ಸುತ್ತಲಿನ ಊರಲ್ಲಿ ಮಾತಾಡಿಕೊಳ್ಳುತ್ತಿದ್ದರು. ನಿಜಾನೋ, ಸುಳ್ಳೋ ನಮಗೆ ಗೊತ್ತಿಲ್ಲ. ಯಲ್ಲಮ್ಮ ತಾಯಿದ್ದು ಎಂದ ತಕ್ಷಣವೇ ಹೊಳೆಗೆ ಬಂದಿದ್ದೇವೆ’ ಎಂದು ಮತ್ತೊಬ್ಬ ಮಾತಂಗಿ ಶಂಕ್ರಮ್ಮ ಹೇಳಿದರು.

**********
ಅಧಿಕಾರಿಗಳ ಸ್ಪಷ್ಟನೆ : ಯಲ್ಲಮ್ಮಗೆ ಸರ್ಪ ದೋಷ ವದಂತಿ ವಿಚಾರವಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಾಜಶ್ರೀ ಜೈನಾಪುರೆ ಪ್ರತಿಕ್ರಿಯಿಸಿದ್ದು, ‘ಇದೆಲ್ಲಾ ಸಂಪೂರ್ಣ ಸುಳ್ಳು ಸುದ್ದಿ. ಈ ರೀತಿ ಏನೂ ಆಗುತ್ತಿಲ್ಲ, ಲಕ್ಷಾಂತರ ಭಕ್ತರು ಬರ್ತಿದ್ದಾರೆ. ಯಾದಗಿರಿಯಲ್ಲಿ ಮಾಡುತ್ತಿರುವುದು ಸುಳ್ಳು ಸುದ್ದಿ. ಭಕ್ತಿ, ಶ್ರದ್ಧೆಯಿಂದ ಇಲ್ಲಿಗೆ ಬನ್ನಿ. ಭೀಮಾ ತೀರದಲ್ಲಿ ನಡೆಯುತ್ತಿರುವುದು ಸುಳ್ಳು ವದಂತಿ. ಯಲ್ಲಮ್ಮ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡ್ತಿದ್ದೇವೆ. ಹೂಂಡಿ ಎಣಿಕೆ ಕೂಡ ಆಗುತ್ತಿದ್ದು, ಈ ಬಾರಿ ಹೆಚ್ಚು ಸಂಗ್ರಹ ಆಗಿದೆ. ಇದರಿಂದ ಗೊತ್ತಾಗುತ್ತೆ ಯಲ್ಲಮ್ಮ ದೇವಸ್ಥಾನಕ್ಕೆ ಹೆಚ್ಚು ಭಕ್ತರು ಬರುತ್ತಿರುವುದು. ಆದರೆ ಯಾರು ವದಂತಿಗಳಿತೆ ಕಿವಿಗೊಡಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.

ಇನ್ನು ಸವದತ್ತಿ ಯಲ್ಲಮ್ಮ ದೇವಸ್ಥಾನದ ಅರ್ಚಕ ರಾಜು ಪಾಟೀಲ್ ಪ್ರತಿಕ್ರಿಯಿಸಿದ್ದು, ‘ಯಾದಗಿರಿಯಲ್ಲಿ ಆಚರಣೆ ಮಾಡುತ್ತಿರುವುದು ಗೊತ್ತಾಗಿದೆ. ಅಂತಹ ಆಚರಣೆ ಯಾರು ಮಾಡಬಾರದು. ನಮ್ಮದು ದೊಡ್ಡ ದೇಗುಲ, ಈ ವದಂತಿಗೆ ಯಾರು ಕಿವಿಗೊಡಬೇಡಿ. ಏನೇ ಆಚರಣೆ ಇದ್ದರೂ ನಿಮ್ಮ ನಿಮ್ಮ ಮನೆಯಲ್ಲಿ ಮಾಡಿ. ಇದೆಲ್ಲಾ ಸುಳ್ಳು ವದಂತಿ, ದೇವಿಗೆ ಸರ್ಪ ದೋಷ ಹೇಗೆ ಆಗುತ್ತೆ. ದೇವಿ ಎಲ್ಲರನ್ನೂ ಕಾಪಾಡುವವಳು. ಭಕ್ತರು ಇದಕ್ಕೆ ಕಿವಿಗೊಡಬಾರದು. ಈ ರೀತಿ ಸುಳ್ಳು ಸುದ್ದಿ ಯಾರು ಹಬ್ಬಿಸಬಾರದು’ ಎಂದು ಅವರು ಮನವಿ ಮಾಡಿದ್ದಾರೆ.