ಬಾಗಲಕೋಟೆ : ಕಳೆದ ಕೆಲ ದಿನಗಳಿಂದ ಬಾಗಲಕೋಟೆ ಜಿಲ್ಲೆಯ ರೈತರು ಕಬ್ಬು ಬೆಲೆ ಏರಿಕೆ ಕುರಿತು ನಡೆಸಿದ ಪ್ರತಿಭಟನೆ ಕೊನೆಗೂ ಯಶಸ್ವಿಯಾಗಿದ್ದು ಬೆಳಗಾವಿಗಿಂತ ಹೆಚ್ಚಿನ ಬೆಲೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು ಬೆಳಗಾವಿ ಜಿಲ್ಲೆಯಾದ್ಯಂತ ನಡೆದ ಕಬ್ಬು ಬೆಲೆ ಏರಿಕೆ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ 3600 ಘೋಷಣೆ ಮಾಡಿತ್ತು. ಇದನ್ನೇ ರೈತ ಸಂಘಟನೆ ಮುಖಂಡರು ಸಂಭ್ರಮಾಚರಣೆ ಮಾಡಿದ್ದರು.

ಆದರೆ ಈಗ ಮುಧೋಳ ರೈತರ ಹೋರಾಟಕ್ಕೆ ಮಣಿದ ಬಾಗಲಕೋಟೆ ಜಿಲ್ಲಾಡಳಿತ ಪ್ರತಿ ಟನ್ ಕಬ್ಬಿಗೆ 3,800 ರೂ. ಘೋಷಣೆ ಮಾಡಿವೆ. ಇದರಿಂದ ಬೆಳಗಾವಿಗಿಂತ 200 ಜಾಸ್ತಿ ಪಡೆಯಲು ಅಲ್ಲಿನ ರೈತರು ಯಶಸ್ವಿಯಾಗಿದ್ದಾರೆ.

ಸಧ್ಯ 3800 ರೂ ನೀಡಲು ಬಾಗಲಕೋಟೆಯ ನಾಲ್ಕು ಸಕ್ಕರೆ ಕಾರ್ಖಾನೆ ಒಪ್ಪಿಕೊಂಡಿದ್ದು ಇನ್ನುಳಿದ ಕಾರ್ಖಾನೆಗಳು ನಿರ್ಧಾರ ಘೋಷಿಸಬೇಕಿವೆ. ಸಧ್ಯ ಬೆಳಗಾವಿ ಜಿಲ್ಲೆಯ ರೈತರಿಗೆ ಕಾರ್ಖಾನೆಗಳು ಕಡಿಮೆ ಬೆಲೆ ನೀಡುತ್ತಿದ್ದು ಹೋರಾಟಗಾರರ ಮೇಲೆ ರೈತರು ಬೇಸರ ಹೊಂದಿದ್ದಾರೆ.