ಬೆಳಗಾವಿ : ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಕೆಲವು ದಿನಗಳಿಂದ ಅಪಪ್ರಚಾರದ ಸುದ್ದಿ ಹರಡಿಸಲಾಗುತ್ತಿವೆ ಎಂಬ ಮಾತು ಅವರ ಆಪ್ತ ವಲಯದಲ್ಲಿ ಕೇಳಿಬರುತ್ತಿವೆ. ಇವೆಲ್ಲಕ್ಕೂ ಸಚಿವರೇ ತೀಕ್ಷ್ಣ ಉತ್ತರ ನೀಡಿದ್ದಾರೆ.

ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ಸೂಕ್ತ ಸಂದರ್ಭದಲ್ಲಿ, ಅವಕಾಶ ಸಿಕ್ಕಾಗ ಉತ್ತರ ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತಿಹಾಸದ ಅರಿವು ಹಾಗೂ ಜ್ಞಾನದ ಕೊರತೆ ಇರುವವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಎಷ್ಟು ದಿನ ಅಪಪ್ರಚಾರ ಮಾಡುತ್ತಾರೋ ಮಾಡಲಿ.

ಕಳೆದ 30–40 ವರ್ಷಗಳಿಂದ ಹೋರಾಟದ ಹಾದಿಯಲ್ಲಿ ಬಂದಿರುವ ನಾವು, ಅಂತಹವರಿಗೆ ಸೂಕ್ತ ಸಂದರ್ಭದಲ್ಲಿ ಉತ್ತರ ನೀಡುತ್ತೇವೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಸಚಿವರು ಹಾಗೂ ಅವರ ಅಳಿಯನ ಮನೆ ಮೇಲೆ ಇಡಿ ದಾಳಿ ಸೇರಿದಂತೆ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸುಳ್ಳು ಹಾಗೂ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಮಾತು ಸಾಹುಕಾರ್ ಆಪ್ತ ಬಳಗದಲ್ಲಿ ಕೇಳಿಬರುತ್ತಿದೆ. ಈ ಬೆಳವಣಿಗೆಗೆ ಸಚಿವರೇ ಖಡಕ್ ಉತ್ತರ ಕೊಟ್ಟಿದ್ದು ಮುಂದೆ ಯಾವ ಹಾದಿ ಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕು.