ಬೆಳಗಾವಿ : ಗಣ್ಯ ವ್ಯಕ್ತಿಗಳು, ಸರಕಾರಿ ಅಧಿಕಾರಿಗಳು ಹಾಗೆಯೇ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸುವ ಪ್ರವಾಸಿ ಮಂದಿರಗಳು ನಕಲಿ ಪತ್ರಕರ್ತರು ಹಾಗೆಯೇ ಕುಡುಕರ ಅಡ್ಡೆಗಳಾಗಿ ಮಾರ್ಪಾಡಾಗುತ್ತಿದ್ದು ಇದರಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪ್ರವಾಸಿ ಮಂದಿರದ ಸುತ್ತ ಸುಳಿಯಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಹುಕ್ಕೇರಿ ತಾಲೂಕಿನಲ್ಲಿರುವ ಪ್ರವಾಸಿ ಮಂದಿರ ಅಕ್ಷರಶಃ ಕುಡುಕರ ತಾಣವಾಗಿ ಮಾರ್ಪಾಡಾಗಿದೆ. ಬೆಳ್ಳಂ ಬೆಳಿಗ್ಗೆಯೇ ನೈಂಟಿ ಹೊಡೆಯಲು ಬರುವ ಪತ್ರಕರ್ತರ ಮುಖವಾಡದಲ್ಲಿರುವ ಕೆಲವರನ್ನು ಹಿಡಿಯುವುದೇ ಕಷ್ಟವಾಗಿದೆ. ಇದರಿಂದ ಪ್ರವಾಸಿ ಮಂದಿರಕ ಕಡೆ ಅಧಿಕಾರಿಗಳು ಸುಳಿಯಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಧ್ಯ ಹುಕ್ಕೇರಿ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ಪ್ರವಾಸಿ ಮಂದಿರದ ಮೇಲ್ವಿಚಾರಕರನ್ನೇ ಹೆದರಿಸುವ ಮಟ್ಟಿಗೆ ಮುಂದುವರಿದಿದೆ. ಅಷ್ಟೇ ಅಲ್ಲದೆ ಸದಾಕಾಲವೂ ಪ್ರವಾಸಿ ಮಂದಿರವನ್ನೇ ಕುಡಿಯುವ ಅಡ್ಡೆಯಾಗಿ ಬದಲಾಯಿಸಿಕೊಂಡಿದ್ದು ಇದರಿಂದ ಸ್ಥಳೀಯ ವಾತಾವರಣವೂ ಹದಗೆಟ್ಟಿದೆ.
ಈ ಕುರಿತು ಸಾರ್ವಜನಿಕರು ಹಾಗೆಯೇ ಅಧಿಕಾರಿಗಳು ಅಸಹಾಯಕರಾಗಿದ್ದು ಕೂಡಲೇ ಲೋಕೋಪಯೋಗಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.



