ಬೆಳಗಾವಿ : ಕೆಲವು ಗ್ರಾಮಗಳಲ್ಲಿ ಹೊಸ ಬ್ಯಾಂಕ್ ಶಾಖೆಗಳ ಸ್ಥಾಪನೆಗೆ ಸಾರ್ವಜನಿಕರಿಂದ ಬೇಡಿಕೆಗಳು ಬರುತ್ತಿದ್ದು, ಬ್ಯಾಂಕುಗಳು ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಬ್ಯಾಂಕಿಗ್ ಸೇವೆಗಳಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿ, ಭಾಷೆಯ ಕಾರಣದಿಂದ ಯಾವುದೇ ಗ್ರಾಹಕರು ತೊಂದರೆ ಅನುಭವಿಸದಂತೆ ನೋಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ಕೃಷಿ ವಿಮೆ ರೈತರ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಕೃಷಿ ವಿಮೆ ಯೋಜನೆಯಡಿ ರೈತರಿಗೆ ಅಗತ್ಯ ನೆರವು ಹಾಗೂ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತೆ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಬೆಳಗಾವಿ ಲೋಕಸಭಾ ಸಂಸದ ಜಗದೀಶ್ ಶೆಟ್ಟರ್ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್ ಅಧಿಕಾರಿಗಳ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳು ಕೃಷಿ ವಿಮೆಗೆ ಸಂಬಂಧಿಸಿದ ಕಾರ್ಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಹಕರಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ರೈತರು ಬೆಳೆ ನಷ್ಟ ಸೇರಿದಂತೆ ವಿವಿಧ ಕಾರಣಗಳಿಂದ ಸಂಕಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ಕೃಷಿ ವಿಮೆ ಯೋಜನೆಯ ಸೌಲಭ್ಯವು ರೈತರಿಗೆ ಸಮಯಕ್ಕೆ ಸರಿಯಾಗಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ವಿಮಾ ಯೋಜನೆಗೆ ಸಂಬಂಧಿಸಿದ ಅರ್ಜಿ ಸ್ವೀಕಾರ, ಪ್ರೀಮಿಯಂ ಪಾವತಿ, ದಾಖಲೆಗಳ ಪರಿಶೀಲನೆ ಹಾಗೂ ಪರಿಹಾರ ಮೊತ್ತದ ಪಾವತಿ ಪ್ರಕ್ರಿಯೆಗಳಲ್ಲಿ ಯಾವುದೇ ರೀತಿಯ ವಿಳಂಬವಾಗದಂತೆ ಬ್ಯಾಂಕ್ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಾದ್ಯಂತ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರ ಸಂಕಷ್ಟವನ್ನು ಮನಗಂಡು ಬ್ಯಾಂಕುಗಳು ಬೆಳೆ ಸಾಲ ಮರುಪಾವತಿಯಲ್ಲಿ ಅಗತ್ಯ ಸಹಕಾರ ನೀಡಬೇಕು. ಎಲ್ಲಾ ಅರ್ಹ ರೈತರನ್ನು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಕಡ್ಡಾಯವಾಗಿ ಒಳಗೊಳ್ಳುವಂತೆ ತಿಳಿಸಿದರು.
ಸರ್ಕಾರದ ಪ್ರಾಯೋಜಿತ ಯೋಜನೆಗಳ ಬಾಕಿ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು. ಸರಕಾರದ ವಿವಿಧ ಜನಪರ ಹಾಗೂ ಆರ್ಥಿಕ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದೆ.
ಗ್ರಾಮೀಣ ಪ್ರದೇಶದ ಜನರಿಗೆ ಬ್ಯಾಂಕಿಂಗ್ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಕೃಷಿಕರು, ಮಹಿಳೆಯರು, ಸಣ್ಣ ಉದ್ಯಮಿಗಳು ಹಾಗೂ ಸ್ವ-ಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸುವಲ್ಲಿ ಯಾವುದೇ ವಿಳಂಬವಾಗದAತೆ ನೋಡಿಕೊಳ್ಳಬೇಕು ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಡಿ ಕೋಳೇಕರ ಮಾತನಾಡಿ, ಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ದಿಮೆಗಳ ಯೋಜನೆ ಅಡಿಯಲ್ಲಿ ಬೆಳಗಾವಿ ಜಿಲ್ಲೆ ಮಹತ್ವದ ಸಾಧನೆ ಮಾಡಿದ್ದು, ಇದುವರೆಗೆ 1,265 ಸಾಲಗಳನ್ನು ಮಂಜೂರು ಮಾಡಲಾಗಿದೆ. ಫಲಾನುಭವಿಗಳಿಗೆ 37.79 ಕೋಟಿ ಸಹಾಯಧನ ಬಿಡುಗಡೆಯಾಗಿದ್ದು, ಬೆಳೆ ವಿಮಾ ಅರ್ಜಿಗಳನ್ನು ಬ್ಯಾಂಕುಗಳು ತ್ವರಿತವಾಗಿ ಸ್ವೀಕರಿಸಿ, ಸಮಯಕ್ಕೆ ಸರಿಯಾಗಿ ಪ್ರಕ್ರಿಯೆಗೊಳಿಸುವಂತೆ ಮನವಿ ಮಾಡಿದರು.
ಲೀಡ್ ಜಿಲ್ಲಾ ವ್ಯವಸ್ಥಾಪಕ ಪ್ರಶಾಂತ್ ಗೋಡಕೆ ಮಾತನಾಡಿ, ಜಿಲ್ಲೆಯ ಬ್ಯಾಂಕುಗಳು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ಮಾಡಿವೆ. ವಿವಿಧ ಆದ್ಯತಾ ಕ್ಷೇತ್ರಗಳಿಗೆ 4,985 ಕೋಟಿ ಸಾಲ ವಿತರಣೆ ಹಾಗೂ 3,392 ಕೋಟಿ ಸಾಲ ಬಿಡುಗಡೆ ಮಾಡಲಾಗಿದ್ದು, 15 ಶೇಕಡಾ ಗುರಿಯ ವಿರುದ್ಧ 34.76 ಶೇಕಡಾ ಸಾಧನೆ ದಾಖಲಿಸಿರುವುದು ಜಿಲ್ಲೆಯ ಬ್ಯಾಂಕಿಂಗ್ ಕ್ಷೇತ್ರದ ಗಮನಾರ್ಹ ಸಾಧನೆಯಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಕೆಸಿಸಿ ಸ್ಯಾಚುರೇಷನ್ ಅಭಿಯಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗೆ ಸನ್ಮಾನ ನೀಡಿ ಸ್ಮರಣಿಕೆ ಪ್ರದಾನ ಮಾಡಲಾಯಿತು. ಅದೇ ರೀತಿಯಲ್ಲಿ ಅತಿ ಹೆಚ್ಚು ಸಾಲ ಮಂಜೂರು ಮಾಡಿದ ಬ್ಯಾಂಕುಗಳಾದ ಕೆನರಾ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕಗಳಿಗೆ ಸಂಸದ ಜಗದೀಶ್ ಶೆಟ್ಟರ್ ಸ್ಮರಣಿಕೆ ನೀಡಿ ಗೌರವಿಸಿದರು.
ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಭಾರತೀಯ ರಿಸರ್ವ್ ಬ್ಯಾಂಕ್ ಎಫ್ಐಸಿಸಿ ಸಹಾಯಕ ಮಹಾ ಪ್ರಬಂಧಕ ಆರ್. ಪ್ರಭಾಕರನ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಅಭಿನವ್ ಯಾದವ್, ಕೆನರಾ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಎಂ. ಚಂದ್ರಶೇಖರ್, ವಿವಿಧ ಬ್ಯಾಂಕುಗಳ ಪ್ರಾದೇಶಿಕ ಮುಖ್ಯಸ್ಥರು, ಬ್ಯಾಂಕ್ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



