ಬೆಳಗಾವಿ : ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿದ ಬಳಿಕ ಮದುವೆಗೆ ನಿರಾಕರಿಸಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬರು ಪ್ರಿಯಕರನ ಮನೆ ಮುಂದೆ ಧರಣಿ ನಡೆಸಿದ ಘಟನೆ ಜಿಲ್ಲೆಯ ಉಪ್ಪರವಾಡಿ ಗ್ರಾಮದಲ್ಲಿ ನಡೆದಿದೆ.

ಉಪ್ಪರವಾಡಿ ಗ್ರಾಮದ ನಿವಾಸಿ ಅಕ್ಷಯ ಉಪ್ಪಾರ ಎಂಬ ಯುವಕ ಕಳೆದ ಐದು ವರ್ಷಗಳಿಂದ ತನ್ನನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ಯುವತಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಆತ್ಮೀಯ ಸಂಬಂಧ ಬೆಳೆದಿತ್ತು ಎನ್ನಲಾಗಿದೆ

ಆದರೆ,  ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದು, ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿರುವ ಯುವತಿ, ನ್ಯಾಯಕ್ಕಾಗಿ ಅಕ್ಷಯ ಉಪ್ಪಾರ ಅವರ ಮನೆ ಮುಂದೆ ಧರಣಿ ಕುಳಿತಿದ್ದಾರೆ.

ಈ ಕುರಿತು ಮಾತನಾಡಿದ ಯುವತಿ, ಮದುವೆ ಆಗುವುದಾಗಿ ನಂಬಿಸಿ ಹಲವು ಬಾರಿ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮದುವೆ ವಿಚಾರ ಪ್ರಸ್ತಾಪಿಸಿದಾಗ ಮುಂದೆ ನೋಡೋಣ ಎಂದು ಹೇಳುತ್ತಾ ಬಂದಿದ್ದರು. ಇದೀಗ ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ತನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಯುವತಿ  ಒತ್ತಾಯಿಸಿದ್ದಾರೆ.