ಚಾಮರಾಜನಗರ :  ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಥಮ ಆಡಳಿತ ಅಧಿಕಾರಿಣಿ ರಾಜ ಯೋಗಿನಿ ಬ್ರಹ್ಮಾಕುಮಾರಿ ಡಾ. ಪ್ರಕಾಶಮಣೀಜಿಯವರ 19ನೇ ಪುಣ್ಯ ಸ್ಮೃತಿ ದಿನದ ಅಂಗವಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಪ್ರಕಾಶ ಭವನದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಹಾಗೂ ವಿಶ್ವಬಂದು ಬಂಧುತ್ವ ದಿನಾಚರಣೆಯನ್ನು ಆಚರಿಸಲಾಯಿತು.

ದಾದೀಜೀಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ದ ಡಾ. ಬಸವರಾಜೇಂದ್ರ, ರಕ್ತದಾನ ಒಂದು ದೊಡ್ಡ ಪುಣ್ಯಕಾರ್ಯವಾಗಿದೆ. ಎರಡು ಜೀವಗಳನ್ನು ಉಳಿಸುವ ಕಾರ್ಯವಾಗುತ್ತದೆ. ಇದೊಂದು ನಿಸ್ವಾರ್ಥ ಸೇವೆಯಾಗಿದೆ. ದೊಡ್ಡ ದೊಡ್ಡ ಅನಾಹುತಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ. ರಕ್ತದಾನ ಮಾಡುವುದರಿಂದ ಅದು ವೃದ್ಧಿಯಾಗುತ್ತದೆ ಹೊರತು ಕೊರತೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಈಶ್ವರೀಯ ವಿಶ್ವವಿದ್ಯಾಲಯದವರು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದು ಪ್ರಶಂಸಿಸಿದರು.

ಪ್ರಸೂತಿ ತಜ್ಞೆ ಶ್ವೇತಾ ಶಶಿಧರ್ ಮಾತನಾಡಿ ತುರ್ತು ಪರಿಸ್ಥಿತಿಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ ಇದರಲ್ಲಿ ಕಾಣದ ಕೈಗಳು ತಮ್ಮ ರಕ್ತವನ್ನು ಕೊಡುವುದರ ಮೂಲಕ ಮನುಷ್ಯತ್ವವನ್ನು ಮೆರೆಯುತ್ತಾರೆ. ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಅಂಥವರಿಗೆ ಎಲ್ಲರ ಆಶೀರ್ವಾದ ಇದ್ದೇ ಇರುತ್ತದೆ.ಅದೇ ಅವರ ಜೊತೆಗೆ ಬರುವಂತಹ ಬುತ್ತಿಯಾಗಿದೆ ಎಂದರು.

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಮನೋಬಲ ತರಬೇತುದಾರೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಮಾತನಾಡಿ ಭಾರತೀಯ ಪರಂಪರೆಯಲ್ಲಿ ದಾನ ಕೊಡುವುದು, ತೆಗೆದುಕೊಳ್ಳುವುದು, ಶ್ರೇಷ್ಠ ಸಂಸ್ಕೃತಿಯಾಗಿದೆ. ಬಟ್ಟೆ ದಾನ ಮಾಡುತ್ತಾರೆ. ಹಣ ದಾನ ಮಾಡುತ್ತಾರೆ. ಬೋಧನೆ ಮಾಡುತ್ತಾರೆ. ಜ್ಞಾನದಾನ ಮಾಡುತ್ತಾರೆ. ಅನ್ನದಾನ ಮಾಡುತ್ತಾರೆ. ಆದರೆ ರಕ್ತದಾನ ಮಾಡುವುದು ಬಹಳ ಶ್ರೇಷ್ಠ ಧಾನವಾಗಿದೆ. ಈಶ್ವರೀಯ ವಿಶ್ವವಿದ್ಯಾಲಯವು ದಾದೀಜೀ ಅವರ ಪುಣ್ಯ ಸ್ಮೃತಿಯಲ್ಲಿ ವಿಶ್ವ ಬಂದುತ್ವವನ್ನು ವೃದ್ಧಿಗೊಳಿಸಲು ರಕ್ತದಾನ ಅಭಿಯಾನವನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ 5 ಲಕ್ಷ ಯೂನಿಟ್ ರಕ್ತವನ್ನು ಸಂಗ್ರಹಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು.

ಇದೇ ಸಂದರ್ಭದಲ್ಲಿ 24 ರಾಜಯೋಗ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ನಶಾ ಮುಕ್ತ ಭಾರತದ ಅಭಿಯಾನದ. ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು. ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್ನ ಬಿಕೆ ಆರಾಧ್ಯ, ಬ್ಲಡ್ ಬ್ಯಾಂಕ್ ನ ರಜನಿ, ಸಂಜೀವಿನಿ ಟ್ರಸ್ಟ್ ನ ಸತೀಶ್, ಪ್ರಮೀಳಾ ಊದುಗಡ್ಡಿ, ನ್ಯಾಯಾಂಗ ಇಲಾಖೆಯ ಶ್ರೀನಿವಾಸ್, ಪೊಲೀಸ್ ಇಲಾಖೆಯ ಸಿದ್ದಯ್ಯಣ್ಣ, ಸಾರಿಗೆ ಇಲಾಖೆಯ ಸಿದ್ದಲಿಂಗ ಮೂರ್ತಿ, ಆರೋಗ್ಯ ಇಲಾಖೆಯ ಗೀತಾ, ಪುಷ್ಪ, ಶಶಿ, ಪುಟ್ಟ ಶೇಖರ ಮೂರ್ತಿ, ಆಶಾ ಜಯಲಕ್ಷ್ಮಿ ಶಿವಕಮಲ, ನಿರ್ಮಲ, ಹೊನ್ನ ಮೇಟಿ ಸುಂದರ್, ಮಧು ಮುಂತಾದವರು ಹಾಜರಿದ್ದರು.