ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ್ದ ಸಂಪುಟ ವಿಸ್ತರಣೆ ಕೊನೆಗೂ ಮುಕ್ತಾಯವಾಗಿದ್ದು ಬೆಳಗಾವಿಯಿಂದ ಒಬ್ಬರಿಗೆ ಮಂತ್ರಿ ಪದವಿ ಸಿಕ್ಕಿದೆ. ಕಾಂಗ್ರೆಸ್ ಹೈಕಮಾಂಡ್ ಅಳೆದುತೂಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಅವಕಾಶ ಕಲ್ಪಿಸಿದೆ.

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಿಡಿತ ಹೊಂದಿರುವ ಸಚಿವ ಸತೀಶ್ ಜಾರಕಿಹೊಳಿ ತೀವ್ರ ವಿರೋಧದ ನಡುವೆ ಲಕ್ಷ್ಮಣ ಸವದಿ ಸಂಪುಟ ಗದ್ದುಗೆ ಏರಲು ಯಶಸ್ವಿಯಾಗಿದ್ದಾರೆ. ಕೊನೆಗೂ ಹೈಕಮಾಂಡ್ ನಾಯಕರು ಸವದಿ ಪರವಾಗಿ ಒಲವು ತೋರಿದ ಹಿನ್ನೆಲೆಯಲ್ಲಿ ಸಚಿವಸ್ಥಾನ ಪಡೆದಿದ್ದಾರೆ.

ಈ ಹಿಂದಿನಿಂದಲೂ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಲಕ್ಷ್ಮಣ ಸವದಿ ಹಾಗೂ ಜಾರಕಿಹೊಳಿ ಸಹೋದರರ ನಡುವೆ ರಾಜಕೀಯ ವೈರತ್ವ ಇದೆ. ಯಾವುದೇ ಪಕ್ಷದಲ್ಲಿ ಲಕ್ಷ್ಮಣ ಸವದಿ ಇದ್ದರೂ ಜಾರಕಿಹೊಳಿ ಸಹೋದರರು ಪ್ರತಿ ಸಂದರ್ಭದಲ್ಲಿ ಎದುರೇಟು ನೀಡುತ್ತಾ ಬಂದಿದ್ದರು.

ಲಕ್ಷ್ಮಣ ಸವದಿ ಸಚಿವರಾದರೆ ಜಿಲ್ಲಾ ರಾಜಕಾರಣದ ಮೇಲೆ ತಮ್ಮ ಹಿಡಿತ ಕೈತಪ್ಪುವ ಕಾರಣಕ್ಕೆ ಸತೀಶ್ ಜಾರಕಿಹೊಳಿ ಹೈಕಮಾಂಡ್ ಮಟ್ಟದಲ್ಲಿ ಸವದಿ ಹೆಸರಿಗೆ ವಿರೋಧ ಮಾಡುತ್ತಾ ಬಂದಿದ್ದರು. ಆದರೆ ಇಲ್ಲವನ್ನೂ ಮೀರಿ ಲಕ್ಷ್ಮಣ ಸವದಿ ಸಂಪುಟದ ಗಾದಿಗೆ ಹತ್ತಿರವಾಗಿದ್ದು ವಿಶೇಷ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿಗೆ ಮಂತ್ರಿ ಸ್ಥಾನ ನೀಡುವ ಭರವಸೆಯನ್ನು ಡಿ.ಕೆ ಶಿವಕುಮಾರ್ ಚುನಾವಣೆ ಪೂರ್ವದಲ್ಲಿ ನೀಡಿದ್ದರು‌. ಅದರಂತೆ ಹೈಕಮಾಂಡ್ ನಾಯಕರಿಗೆ ಲಕ್ಷ್ಮಣ ಸವದಿ ಅನಿವಾರ್ಯತೆ ಕುರಿತು ಮನದಟ್ಟು ಮಾಡಿರುವ ಡಿಕೆಶಿ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಕೀಯವಾಗಿ ಹಾವು, ಮುಂಗುಸಿಯಂತಿರುವ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಒಂದಾದರೆ ಜನರಿಗೆ ಇನ್ನಷ್ಟು ಲಾಭ ಎಂಬುವುದು ಸಧ್ಯದ ಬಯಕೆ.