ಬೆಳಗಾವಿ : ಸಂಪುಟ ವಿಸ್ತರಣೆ ಕುರಿತು ದೆಹಲಿಯ ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ಮುಂದುವರಿದಿದ್ದು ಈ ಮಧ್ಯೆ ಲೋಕೋಪಯೋಗಿ ಸಚಿವ ಸತಿಶ್ ಜಾರಕಿಹೊಳಿ ಕೆಲ ನಾಯಕರನ್ನು ಭೇಟಿಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿರುವ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಯಾರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂಬ ಬೇಡಿಕೆ‌ ಇಟ್ಟಿದ್ದು ಮೂಲಗಳಿಂದ ಸ್ಪಷ್ಟವಾಗಿದೆ.

ಈಗಾಗಲೇ ಬೆಳಗಾವಿಯ ಕಾಂಗ್ರೆಸ್ ಶಾಸಕರ ನಡುವೆ ಮಂತ್ರಿ ಸ್ಥಾನದ ಪೈಪೋಟಿ ಏರ್ಪಟ್ಟಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕರಾದ ಅಶೋಕ್ ಪಟ್ಟಣ, ಮಹಾಂತೇಶ್ ಕೌಜಲಗಿ ನಡುವೆ ತೀವ್ರ ಪೈಪೋಟಿ ಇದ್ದು ಮಂತ್ರಿ ಸ್ಥಾನದ ಕಸರತ್ತು ಮುಂದುವರಿಸಿದ್ದಾರೆ.

ಈ ನಡುವೆ ಸಚಿವ ಸತೀಶ್ ಜಾರಕಿಹೊಳಿ ಜಿಲ್ಲೆಯ ಇಬ್ಬರು ನಾಯಕರ ಕುರಿತು ಬ್ಯಾಟಿಂಗ್ ಮಾಡುತ್ತಿದ್ದು ಕೆಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಟ್ಟಣ ಹಾಗೂ ಕೌಜಲಗಿ ಪರವಾಗಿ ಸಾಹುಕಾರ್ ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆಸಿದ್ದು ತಿಳಿದುಬಂದಿದೆ.

ಇನ್ನೂ ಸತೀಶ್ ಜಾರಕಿಹೊಳಿ ನಡೆಯಿಂದ ಕೆಲವರಿಗೆ ಆತಂಕವಾಗಿದ್ದು ತಾವೂ ಹೈಕಮಾಂಡ್ ನಾಯಕರನ್ನು ಸೆಳೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಸಧ್ಯ ಸಾಹುಕಾರ್ ತಂತ್ರ ಫಲಿಸಿದರೆ ಅಶೋಕ್ ಪಟ್ಟಣ ಹಾಗೂ ಮಹಾಂತೇಶ್ ಕೌಜಲಗಿ ಇಬ್ಬರಲ್ಲಿ ಒಬ್ಬರಿಗೆ ಸಿಹಿ ಸುದ್ದಿ ಗ್ಯಾರಂಟಿ ಎನ್ನಲಾಗುತ್ತಿದೆ.‌