ಅಡ್ಡಮತ ಹಾಕಿದವರು ಜನ್ಮದಲ್ಲೇ ಚುನಾವಣೆ ನಿಲ್ಲದಂತೆ ಮಾಡುತ್ತೇವೆ – ಆರ್ ಅಶೋಕ್

ಬೆಳಗಾವಿ : ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರನ್ನು ಸಧ್ಯದಲ್ಲೇ ಗುರುತಿಸಿ ಅವರ ಜನ್ಮದಲ್ಲಿ ಚುನಾವಣೆ ನಿಲ್ಲದಂತೆ ಮಾಡುತ್ತೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ಹೊರಹಾಕಿದರು.
ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಜಗನ್ನಾಥರಾವ್ ಜೋಶಿ ಸ್ಮಾರಕ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರ ಇದೇ ಎಂದು ವಿರೋಧಪಕ್ಷದ ಶಾಸಕರನ್ನು ಹೆದರಿಸಿ ಕುದುರೆ ವ್ಯಾಪಾರ ಮಾಡುತ್ತಿದೆ. ನಮ್ಮ ವಿರುದ್ಧ ನೈತಿಕತೆ ಪ್ರಶ್ನೆ ಮಾಡುವ ಅವರು ತಾವು ಏನು ಮಾಡುತ್ತಿದ್ದಾರೆ ಎಂದು ಗಮನಿಸಲಿ ಎಂದರು.
ಅಡ್ಡ ಮತದಾನದ ಕುರಿತು ಸಂಪೂರ್ಣ ಮಾಹಿತಿ ನೀಡಲು ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಭೇಟಿಗೆ ಸಮಯ ಕೇಳಲಾಗಿದೆ. ಸಮಯಾವಕಾಶ ಸಿಕ್ಕ ನಂತರ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜೊತೆ ದೆಹಲಿಗೆ ಹೋಗಿ ಸಮಗ್ರ ವರದಿ ನೀಡಲಾಗುತ್ತದೆ. ಅಡ್ಡ ಮತದಾನ ಮಾಡಿರುವ ಶಾಸಕರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದರು.
ಡಿ.ಕೆ ಶಿವಕುಮಾರ್ ಕರ್ನಾಟಕದ ಚಾಣಕ್ಯ ಎಂದು ಬಿಂಬಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಇವರು. ಡಿಕೆಶಿ ಯಾವ ಚಾಣಕ್ಯನೂ ಅಲ್ಲ. ಕುದುರೆ ವ್ಯಾಪಾರ ಮಾಡುವವ ಚಾಣಕ್ಯ ಆಗಲಾರ. ಕಳೆದ ಬಾರಿ ಡಿ.ಕೆ ಶಿವಕುಮಾರ್ ಮಂತ್ರಿ ಸ್ಥಾನದಲ್ಲಿ ಇರುವಾಗಲೇ 17 ಶಾಸಕರು ರಾಜೀನಾಮೆ ನೀಡಿದ್ದಾಗ ಇವರು ಚಾಣಕ್ಯ ನೀತಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.

