ಅಥಣಿ : ಈಜಲು ಹೋದ ಬಾಲಕ ನೀರುಪಾಲು, ಮುಂದುವರಿದ ಶೋಧಕಾರ್ಯ..!
ಅಥಣಿ : ಕಲ್ಲಿನ ಕಣಿಯಲ್ಲಿ ಈಜಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ಅಥಣಿ ಪಟ್ಟಣದ ಸುಣಗಾರ ಭಟಿ ಹತ್ತಿರ ಶನಿವಾರ ಮುಂಜಾನೆ ನಡೆದಿದೆ.
ಸಮರ್ಥ ಅಮೃತ ಪನಾಳಕರ (16) ನೀರುಪಾಲಾದ ಬಾಲಕ.
ಗಡದೆ ಎಂಬವರ ಒಡೆತನದ ಕಲ್ಲಿನ ಕಣಿಯಲ್ಲಿ ಸಂಗ್ರಹವಾಗಿದ್ದು ನೀರಿನ ಆಳವನ್ನು ಅರಿಯದೆ ಈಜಲು ಹೋದ ಸಮರ್ಥ ಕಾಲು ಜಾರಿ ನೀರಿಗೆ ಬಿದ್ದು ಅಲ್ಲಿಗೆ ಮುಳುಗಿದ್ದಾನೆ. ಇದನ್ನು ಕಂಡು ಇನ್ನಿಬ್ಬರು ಬಾಲಕರು ಅಲ್ಲಿಂದ ಓಡಿ ಹೋಗಿ ತಮ್ಮ ಸಂಬಂಧಿಕರಿಗೆ ಹೇಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು, ಬಾಲಕನ ಸಂಬಂಧಿಕರು ಕಣಿಯತ್ತ ಧಾವಿಸಿ ಹೋದಾಗ ಬಾಲಕ ಸಮರ್ಥ್ ಧರಿಸುವ ಚಪ್ಪಲಿ, ಬಟ್ಟೆಗಳು ಮಾತ್ರ ಪತ್ತೆಯಾಗಿದ್ದು, ಆತ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಆಘಾತಕಾರಿ ಘಟನೆಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳೀಯರು ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಮುಂಜಾನೆ 10 ಗಂಟೆಯಿಂದ ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿನೊಂದಿಗೆ ಬಾಲಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಜನರೇಟರ್ ಅಳವಡಿಸುವ ಮೂಲಕ ಮೂರು ಪಂಪ್ಸೆಟ್ಟುಗಳನ್ನು ಅಳವಡಿಸಿ ಕಣಿಯಿಂದ ನೀರನ್ನ ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ. ಶವಶೋಧ ಕಾರ್ಯಚರಣೆಯ ಮುಂದುವರೆದಿದೆ.

