ರಾಮದುರ್ಗ – ಲಂಚಕ್ಕೆ ಬೇಡಿಕೆ ; ಗ್ರಾ.ಪಂ. ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಬೆಳಗಾವಿ : ಮನೆಯ ಉತಾರದಲ್ಲಿ ಮನೆ, ಅಂಗಡಿ ಹಾಗೂ ಪಕ್ಕದಲ್ಲಿರುವ ಖಾಲಿ ಜಾಗದ ಕ್ಷೇತ್ರವನ್ನು ಪಂಚಾಯತಿ ಆಸ್ತಿ ರಜಿಸ್ಟರ್ನಲ್ಲಿ ನಮೂದಿಸಿ ಚಾಲ್ತಿ ಉತಾರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ರಾಮದುರ್ಗ ತಾಲೂಕಿನ ನರಸಾಪೂರ ಗ್ರಾಪಂ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನರಸಾಪೂರ ಗ್ರಾಪಂ ಕಾರ್ಯದರ್ಶಿ ಮಹಾಂತೇಶ ಬಳ್ಳಾರಿ ಅವರು ಒಟ್ಟು 22 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಮೊದಲ ಕಂತಾಗಿ 15 ಸಾವಿರ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ನಡೆಸಿ ಬಂಧಿಸಿದ್ದಾರೆ.
ಚಿಲಮೂರ ಗ್ರಾಮದ ಯಂಕಪ್ಪ ಯಲ್ಲಪ್ಪ ಮರಡಿ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು. ಫಿರ್ಯಾದಿದಾರರ ಪತ್ನಿಯ ಹೆಸರಿನಲ್ಲಿರುವ ಆಸ್ತಿ ನಂ. 420/2ರ ಮನೆಯ ಉತಾರೆಯಲ್ಲಿ ಮನೆಯ ಸುತ್ತಲಿನ ಖಾಲಿ ಜಾಗದ ಕ್ಷೇತ್ರಗಳನ್ನು ಸೇರಿಸುವುದು ಹಾಗೂ ಮನೆ, ಅಂಗಡಿ ಮತ್ತು ಪಕ್ಕದಲ್ಲಿರುವ ಖಾಲಿ ಜಾಗವನ್ನು ಪಂಚಾಯತಿ ಆಸ್ತಿ ರಜಿಸ್ಟರ್ನಲ್ಲಿ ನಮೂದಿಸಿ ಚಾಲ್ತಿ ಉತಾರ ನೀಡಲು ಆರೋಪಿತ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಬೆಳಗಾವಿಯಲ್ಲಿ ಪ್ರಕರಣ ಸಂಖ್ಯೆ 05/2026ರಡಿ ಲಂಚ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ-2018) ಕಲಂ 7(ಎ) ಅಡಿಯಲ್ಲಿ ಮೇ 18ರಂದು ಪ್ರಕರಣ ದಾಖಲಾಗಿತ್ತು.
ಕರ್ನಾಟಕ ಲೋಕಾಯುಕ್ತ ಬೆಳಗಾವಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ, ಐಪಿಎಸ್ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಭರತ್ ಎಸ್.ಆರ್., ಪೊಲೀಸ್ ಇನ್ಸಪೆಕ್ಟರ್ ಸಂಗಮನಾಥ ಹೊಸಮನಿ ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿತು.
ಲಂಚದ ಹಣ ಪಡೆಯುವ ವೇಳೆ ಆರೋಪಿಯನ್ನು ಹಣ ಸಮೇತ ವಶಕ್ಕೆ ಪಡೆಯಲಾಗಿದೆ.
ಪ್ರಕರಣ ಸಂಬಂಧ ಆರೋಪಿಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

