ಬೆಳಗಾವಿ : ವ್ಯಕ್ತಿಯನ್ನು ಕೊಲೆಗೈದು ಕಾರಿನಲ್ಲಿ ಪೆಟ್ರೋಲ್ ಬೆಂಕಿ ಹಚ್ಚಿ ಮೃತದೇಹವನ್ನು ಸುಟ್ಟ ಘಟನೆ ಧಾರವಾಡ ತಾಲೂಕಿನ ರಾಮಾಪುರ ರೈಲ್ವೆ ಹಳಿ ಸಮೀಪ ನಡೆದಿದೆ.‌

ಬೆಳಗಾವಿ ಜಿಲ್ಲೆ ಬೈಲಹೊಂಗಲದ ಮಾಜಿ ಶಾಸಕ ಬಾಬುರಾವ ಬೋಳಶೆಟ್ಟಿ ಪುತ್ರ ರಾಜು ಬೋಳಶೆಟ್ಟಿ (54) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಹೊಲಕ್ಕೆ ಹೋಗುವ ರೈತರು ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಯಾವುದೇ ರಾಜಕೀಯ ಸಂಘಟನೆಯಲ್ಲಿ ತೊಡಗಿಕೊಂಡಿರದ ರಾಜು ಬೋಳಶೆಟ್ಟಿ ಅವರು ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಕೃಷಿ ಕೆಲಸ ಮಾಡಿಕೊಂಡು ವಾಸವಿದ್ದರು. ದುಷ್ಕರ್ಮಿಗಳು ಇವರನ್ನು ಕೊಲೆ ಮಾಡಿ ಮೃತದೇಹ ಸುಟ್ಟು ಹಾಕಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.‌

ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಭೇಟಿನೀಡಿ ಪರಿಶೀಲನೆ ‌ನಡೆಸಿದರು.‌ ಬೆರಳಚ್ಚು ತಂಡದವರು ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.