ಲಕ್ಷ್ಮಣ ಸವದಿಗೆ ಮಾನಸಿಕ ಹಿಂಸೆ ; ಜಾರಕಿಹೊಳಿ ಸಹೋದರರ ವಿರುದ್ಧ ಕಾಗೆ ಅಸಮಾಧಾನ ; ಇದೆಲ್ಲ ನಾಟಕ ಎಂದ ಸವದಿ ಅಭಿಮಾನಿಗಳು…!
ಬೆಳಗಾವಿ : ಸಧ್ಯ ಬಿಡಿಸಿಸಿ ಬ್ಯಾಂಕ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನನ್ನ ಗಮನಕ್ಕೆ ಬಂದಿಲ್ಲ. ಬೇಕೆಂದೇ ಲಕ್ಷ್ಮಣ ಸವದಿಗೆ ಮಾನಸಿಕ ಹಿಂಸೆ ನೀಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಜಾರಕಿಹೊಳಿ ಸಹೋದರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅಥಣಿ ಬಿಡಿಸಿಸಿ ಬ್ಯಾಂಕ್ ಮ್ಯಾನೆಂಜರ್ ಬದಲಾವಣೆ ವಿಚಾರವಾಗಿ ಪಿಕೆಪಿಎಸ್ ಸದಸ್ಯರು ರಾಜು ಕಾಗೆ ಭೇಟಿಯಾದ ಸಂದರ್ಭದಲ್ಲಿ ಮಾತನಾಡಿರುವ ವೀಡಿಯೋ ಸಧ್ಯ ವೈರಲ್ ಆಗುತ್ತಿದೆ.
ಶಂಕರ್ ನಂದೆಶ್ವರ ವರ್ಗಾವಣೆ ಪೂರ್ವ ನಿಯೋಜಿತ, ನಮ್ಮ ಬಿಡಿಸಿಸಿ ಬ್ಯಾಂಕಿನಲ್ಲಿ ಹತ್ತು ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಥಣಿ ಮ್ಯಾನೇಜರ್ ಒಬ್ಬನೇ ಯಾಕೆ ವರ್ಗಾವಣೆ ಆಗುತ್ತಾನೆ?. ಅಂದರೆ ಶಾಸಕ ಲಕ್ಷ್ಮಣ ಸವದಿಗೆ ತೊಂದರೆ ಕೊಡುವ ನಿಟ್ಟಿನಲ್ಲಿ ಹಾಗೂ ಮಾನಸಿಕವಾಗಿ ಕುಗ್ಗಿಸಲು ಬೇಕೆಂದು ಇವರ ವರ್ಗಾವಣೆ ಆಗಿದೆ ಎಂದರು.
ಈ ವರ್ಗಾವಣೆ ಬಗ್ಗೆ ಅಧ್ಯಕ್ಷರಾದ ಅಣ್ಣಸಾಬ್ ಜೊಲ್ಲೆ ನನ್ನ ಗಮನಕ್ಕೆ ತರಬೇಕಾಗಿತ್ತು. ಆದರೆ ಅಧ್ಯಕ್ಷರು ರಬ್ಬರ್ ಸ್ಟಾಂಪ್ ಇದ್ದಹಾಗೆ. ಎಲ್ಲವೂ ನಡೆದಿದೆ, ಆದರೆ ಅದನ್ನು ನಡೆಸೋಕೆ ಹೈಕಮಾಂಡ್ ಬೇರೆ ಇದ್ದಾರೆ. ಈ ವಿಚಾರ ಶಾಸಕ ಲಕ್ಷ್ಮಣ್ ಸವದಿ ಅವರಿಗೂ ಗೊತ್ತು, ನನಗೂ ಗೊತ್ತು, ನಿಮಗೂ ಗೊತ್ತು, ಬೇಕು ಅಂತಲೇ ಟಾರ್ಗೆಟ್ ಮಾಡಿ ನಡೆಯುತ್ತಿದೆ ಎಂದರು.
ಶಾಸಕ ಲಕ್ಷ್ಮಣ್ ಸವದಿ ಅಪೆಕ್ಸ್ ಬ್ಯಾಂಕಿಗೆ ಹಿಂದೆ ನಾಮನಿರ್ದೇಶನ ಆಗುತ್ತಿದ್ದರು. ಸಧ್ಯ ಆ ಜಾಗಕ್ಕೆ ಬೇರೆದವರು ಬಂದರು. ಇಷ್ಟೆಲ್ಲ ಬೆಳವಣಿಗೆ ಹಿಂದೆ ಯಾರಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ಆನೆಗೆ ಉಡಾಳ ಎನ್ನುವರು ಯಾರು?. ಅವರಿಗೆ ಯಾರು ಹೇಳೋರು? ಪ್ರಸ್ತುತ ರಾಜಕಾರಣ ನಿಮಗೆಲ್ಲ ಗೊತ್ತಿದೆ ನನ್ನ ಬಾಯಿಂದ ನೀವು ಹೇಳುತ್ತಿದ್ದೀರಿ. ಸದ್ಯದ ಡಿಸಿಸಿ ಬ್ಯಾಂಕ್ ಬೆಳವಣಿಗೆ ಪೂರ್ವ ನಿಯೋಜಿತ ಎಂದು ಶಾಸಕ ರಾಜು ಕಾಗೆ ಪರೋಕ್ಷವಾಗಿ ಜಾರಕಿಹೊಳಿ ಸಹೋದರರ ವಿರುದ್ಧ ಗುಡುಗಿದರು.
ಕಾಗೆ ವಿರುದ್ಧ ಸವದಿ ಬೆಂಬಲಿಗರ ಆಕ್ರೋಶ : ಇನ್ನೂ ಅಥಣಿ ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರ ವರ್ಗಾವಣೆ ವಿಚಾರವಾಗಿ ಶಾಸಕ ಕಾಗೆ ವಿರುದ್ಧ ಲಕ್ಷ್ಮಣ ಸವದಿ ಬೆಂಬಲಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅವರಿಂದಲೇ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವ ನೀವು ಈಗ ಏನು ಗೊತ್ತಿಲ್ಲ ಎಂದು ಹೇಳುವುದು ಹಾಸ್ಯಾಸ್ಪದ. ನೇರವಾಗಿ ಯುದ್ಧ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.


