ಮನನೊಂದು ಪ್ರಾಣ ಬಿಟ್ಟ ಅಯ್ಯಪ್ಪ ಸ್ವಾಮಿ ಬಾಲ ಭಕ್ತ ; ಕಣ್ಣೀರಲ್ಲಿ ಕೈ ತೊಳೆದ ಕುಟುಂಬ..!
ಬೆಳಗಾವಿ : ಅಯ್ಯಪ್ಪ ಸ್ವಾಮಿ ಮಾಲೆ ಧರಿಸಲು ಮನೆಯಲ್ಲಿ ಒಪ್ಪಿಗೆ ನೀಡದ ಕಾರಣಕ್ಕೆ 14 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ರಾಮದುರ್ಗ ತಾಲೂಕಿನ ಗಡದ ಕೇರಿಯಲ್ಲಿ ನಡೆದಿದೆ.
ಧರಣೇಶ ಹಲಗೆ (14) ಮೃತ ದುರ್ದೈವಿ. ಅಯ್ಯಪ್ಪ ಸ್ವಾಮಿ ವೃತ ಹಿಡಿಯುವ ಆಸೆಯಿಂದ ಈ ಬಾರಿ ನಾನು ಮಾಲೆ ಧರಿಸುತ್ತೇನೆ ಎಂದು ಬಾಲಕ ಮನೆಯವರಲ್ಲಿ ಕೇಳಿಕೊಂಡಿದ್ದಾನೆ. ಮಗ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುವ ಕಾರಣ ಹಾಗೂ ಚಿಕ್ಕ ವಯಸ್ಸಿದ್ದು ಕಠಿಣ ವೃತ ಆಚರಣೆ ಕಷ್ಟದ ಕೆಲಸವೆಂದು ತಾಯಿ ನಿರಾಕರಿಸಿದ್ದಾಳೆ.
ಕಳೆದ ವರ್ಷ ಬಾಲಕ ಧರಣೇಶ ತಂದೆಯ ಜೊತೆಗೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದ. ದುರಾದೃಷ್ಟವಶಾತ್ ಬಾಲಕನ ತಂದೆ ಮೃತಪಟ್ಟು ವರ್ಷ ಕಳೆದಿಲ್ಲ. ಈ ವರ್ಷವೂ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಲು ಬಾಲಕ ನಿರ್ಧರಿಸಿದ್ದಾಗ ತಾಯಿ ತಡೆದಿದ್ದಾಳೆ. ಶಬರಿಮಲೆಗೆ ಕರೆದೊಯ್ಯುಲು ಯಾರೂ ಇಲ್ಲ. ಈ ಕಾರಣಕ್ಕೆ ಮಾಲೆ ಹಾಕುವುದು ಬೇಡ ಎಂಬ ಬುದ್ದಿವಾದ ಹೇಳಿದ್ದಾಳೆ.
ತನಗೆ ಅಯ್ಯಪ್ಪ ಸ್ವಾಮಿ ವೃತ ಆಚರಣೆಗೆ ಮನೆಯವರು ಅವಕಾಶ ನೀಡಲಿಲ್ಲ ಎಂದು ಮನನೊಂದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೂಡಲೇ ಸ್ಥಳೀಯರು ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದರು ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
ಧರಣೇಶ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಮನೆಯವರ ಆಕ್ರಂದಣ ಮುಗಿಲು ಮುಟ್ಟಿತ್ತು. ಅಯ್ಯಪ್ಪ ಸ್ವಾಮಿ ಮಾಲೆ ಹಾಕಬೇಡ ಎಂದಿದ್ದಕ್ಕೆ ನಮ್ಮ ಮಗ ಈ ನಿರ್ಧಾರ ತಗೆದುಕೊಳ್ಳುತ್ತಾನೆ ಎಂಬ ಕಲ್ಪನೆಯೂ ಇರಲಿಲ್ಲ ಎಂದು ಮೃತನ ತಾಯಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.


