ಯಾಕೆ ಇಷ್ಟೊಂದು ಅವಸರ ಮಾಡಿದ್ರಿ ಅಜ್ಜಾರ ; ವಿನಾಯಕ ಮಠಪತಿ
ಪಂಚಾಕ್ಷರಿ ಸಾಲಿಮಠ ಸಾಹೇಬ್ರು….ಕರೆ ಮಾಡಿದಾಗ ಅಜ್ಜಾರ ಸಮಸ್ಕಾರ ಎಂಬ ಮಾತು ಆಕಡೆಯಿಂದ ಬರುತ್ತಿತ್ತು. ನಾವು ಅಜ್ಜಾರ ಹೆಂಗ ಅದೀರಿ ಎನ್ನುತ್ತ ಸಂಭಾಷಣೆ ಪ್ರಾರಂಭ ಮಾಡ್ತಿದ್ವಿ.
ಕಳೆದ 2018 ನನ್ನ ಕಾಲೇಜು ದಿನಗಳಿಂದ ಪರಿಚಿತರು. ಹೆಚ್ಚಿನ ಆಪ್ತತೆ ಬೆಳೆದಿದ್ದು ಬೈಲಹೊಂಗಲ ಠಾಣೆ ಸಿಪಿಐ ಆಗಿ ಬಂದಾಗ. ವಾರದಲ್ಲಿ ಒಂದೆರಡು ಸಲ ನಮ್ಮ ಮಧ್ಯೆ ಮಾತುಕತೆ ಆಗುತ್ತಿತ್ತು. ತಪ್ಪಿಯೂ ವೃತ್ತಿ ಬದುಕಿನ ವಿಷಯ ಹಂಚಿಕೊಂಡವರಲ್ಲ ಈ ವ್ಯಕ್ತಿ.
ಮೊನ್ನೆಯಷ್ಟೇ ಮದುವೆ ಕಾರ್ಯಕ್ರಮ ಹಿನ್ನಲೆಯಲ್ಲಿ ಕರೆ ಮಾಡಿ ಮಾತಾಡಿದ್ದೇ. ದೂರದಲ್ಲಿರುವೆ ಅಜ್ಜಾರ ಭೇಟಿಯಾಗೋಣ ಎಂದು ಹೆಳಿದ್ದ ಸ್ವರ ಈಗಲೂ ಮಾಸಿಲ್ಲ.
ಸಾಲಿಮಠರು ಒಬ್ಬ ಒಳ್ಳೆಯ ಬರಹಗಾರರು. ಟೈಪಿಸಿ ಇಟ್ಟ ಅದೆಷ್ಟೋ ಕಥೆಗಳು ಅವರ ಬಳಿ ಇವೆ. ಅನೇಕಸಲ ಸರ್ ಬುಕ್ ಮಾಡೋಣ ರೀ ಅಂತ ಹೇಳ್ತಿದ್ದೆ. ಮುಂದೆ ನೋಡಿದರಾಯ್ತು ಅಂತ ನಕ್ಕು ಸುಮ್ಮನಾಗುತ್ತಿದ್ದರು.
ಗ್ರಾಮೀಣ ಭಾಗದ ಬಡ ಮಹಿಳೆ ಕುರಿತು ಇವರು ಬರೆದಿದ್ದ ಆ ಒಂದು ಕಥೆ ನನ್ನನ್ನು ತುಂಬಾ ದಿನಗಳವರೆಗೆ ಕಾಡಿತ್ತು. ಇದೇ ವಿಷಯವಾಗಿ ಸ್ನೇಹಿತೆ ಭಾಗ್ಯಶ್ರೀ ಹೆಗಡೆ ಅವರಿಗೂ ಕಥೆ ಕಳುಹಿಸಿ ಓದಲು ಹೇಳಿದ್ದೇ.
ಕೊನೆಯ ಬಾರಿಗೆ ನಮ್ಮಿಬ್ಬರ ಭೇಟಿಯಾಗಿದ್ದು ಕಳೆದ ಕಿತ್ತೂರು ಉತ್ಸವ ವೇಳೆ. ಕರೆದು ಮಾತನಾಡಿಸಿ ಏನಂತಾರ ಅಜ್ಜಾರು ಅನ್ನುತ್ತಾ ಅನೇಕ ವಿಷಯಗಳ ಕುರಿತು ಮಾತನಾಡಿದ್ದರು. ಇದೇ ವಿಚಾರವಾಗಿ ಪ್ರಜಾವಾಣಿ ಫೋಟೋಗ್ರಾಫರ್ ಏಕನಾಥ ಅವರು ಗುರುಗಳ ಸಮ್ಮಿಲನ ಆಯ್ತು ಯಾರೂ ಕಾಣಿಸಲ್ಲ ಇವರಿಗೆ ಅಂತಿದ್ರು.
ನಿನ್ನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಜ್ಜಾರು ನಮ್ಮನ್ನ ಅಗಲಿದ್ದಾರೆ. ದೇವರು ಇಂತಹ ಸೌಮ್ಯ ಸ್ವಭಾವದ ವ್ಯಕ್ತಿಗೆ ಈ ಪರಿಸ್ಥಿತಿ ತರಬಾರದಿತ್ತು. ಅವರ ಒಬ್ಬರು ಮಕ್ಕಳನ್ನು ನೋಡಿದರೆ ಹೊಟ್ಟೆ ಉರಿಯುತ್ತೆ. ಏನ್ ಮಾಡೋದು.
ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹೊತ್ತಿ ಉರಿಯುವ ಕಾರಿನ ವೀಡಿಯೋ ನೋಡಿದರೆ ಕರಳು ಹಿಂಡಿದಂತಾಗುತ್ತದೆ. ಆತ್ಮೀಯ ಅಜ್ಜಾರು ಇಲ್ಲದ ಸುದ್ದಿ ಕೇಳಿ ತುಂಬಾ ನೋವಾಗುತ್ತಿದೆ. ಹೋಗಿ ಬನ್ನಿ ಅಜ್ಜಾರ.
ಅದ್ಯಾಕೋ ಅಜ್ಜಾರ ಸಾವಿನ ಸುದ್ದಿ ಬರೆಯುವ ಶಕ್ತಿ ಕಳೆದುಕೊಂಡಿರುವೆ. ಒಂದು ಅಕ್ಷರ ಬರೆಯಲೂ ಮನಸ್ಸು ಬರುತ್ತಿಲ್ಲ. ಇದೇ ಕಾರಣಕ್ಕೆ ಮಿತ್ರ ಹಾಗೂ ಬೈಲಹೊಂಗಲ ವರದಿಗಾರ ಶರೀಫ ನಧಾಪರಿಗೆ ಸುದ್ದಿ ಬರೆದು ಕೊಡಲು ವಿನಂತಿಸಿಕೊಂಡೆ. ಅವರ ಸರಳತೆ ಹಾಗೂ ಕರ್ತವ್ಯ ನಿಷ್ಠೆ ಕುರಿತು ಬರೆಯುವ ಅವಶ್ಯಕತೆ ಇಲ್ಲ. ಜನರಿಗೆ ಗೊತ್ತು ಅವರೆಂತ ವ್ಯಕ್ತಿ ಎಂದು.
ವಿಷಯ ಸಾಕಷ್ಟಿದ್ದರು ಮಾತು ಬರುತ್ತಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. Miss u ಅಜ್ಜಾರ…🙏
ನಿಮ್ಮ ಪ್ರೀತಿಯ
ವಿನಾಯಕ ಮಠಪತಿ

