ಬೆಳಗಾವಿ : ಮಹಾರಾಷ್ಟ್ರದ ಘಟ್ಟ ‌ಪ್ರದೇಶದಲ್ಲಿ‌ ಮಳೆ ಅವಾಂತರ ಕಡಿಮೆಯಾಗಿದ್ದರೂ ಕೃಷ್ಣಾ, ವೇದಗಂಗಾ ಹಾಗೂ ದೂದಗಂಗಾ ನದಿ ಒಳ ಹರಿವು ಹೆಚ್ಚಾದ ಪರಿಣಾಮ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಮುಂದುವರಿದಿದೆ. ಈ ಕಾರಣಕ್ಕೆ ಪ್ರವಾಹ ಪೀಡಿತ ಗ್ರಾಮಗಳ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಹರಿದುಬರುತ್ತಿರುವ ಪರಿಣಾಮ,ದೂಧಗಂಗಾ ನದಿಗೆ ನೀರಿನ ಮಟ್ಟ ಹೆಚ್ಚಾಗಿ ಯಕ್ಸಂಬಾ ಪಟ್ಟಣದ ಕರ್ಲಹೊಂಡಲಿಂಗೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಸಾರ್ವಜನಿಕರಿಗೆ ದೇವರ ದರ್ಶನ ನಿರ್ಬಂಧಿಸಲಾಗಿದೆ‌. ಅಷ್ಟೇ ಅಲ್ಲದೆ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿ ಪಕ್ಕದಲ್ಲಿರುವ ಯಡೂರು ವೀರಭದ್ರೇಶ್ವರ ದೇವಸ್ಥಾನದ ಜಲಾವೃತಗೊಂಡಿದ್ದು ಜನ ಪ್ರವಾಹದ ಮಧ್ಯೆ ದರ್ಶನ ಪಡೆಯುತ್ತಿದ್ದಾರೆ.

ಪ್ರವಾಹದ ಕುರಿತು ಮಾಹಿತಿ‌ ನೀಡಿರುವ ಚಿಕ್ಕೋಡಿ ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ, ಕೃಷ್ಣಾ ಸೇರಿದಂತೆ ದೂಧಗಂಗಾ, ವೇದಗಂಗಾ ನದಿಗಳ ಒಳಹರಿವು ಶನಿವಾರ ಕಡಿಮೆಯಾಗಿದ್ದು ಜನರು ಪ್ರವಾಹದ ಕುರಿತು ಆತಂಕ ಪಡುವ ಅಗತ್ಯ ಇಲ್ಲ ಎಂದರು. ಮಹಾರಾಷ್ಟ್ರದಲ್ಲಿ‌ ಮಳೆಯ ಪ್ರಮಾಣ ಕಡಿಮೆಯಾಗಿದೆ. ಜನರು ನದಿ ಹತ್ತಿರ ಸ್ನಾನ, ಬಟ್ಟೆ,‌ ವಾಹನ ತೊಳೆಯಲು ಹೋಗಬಾರದೆಂದು ಮನವಿ ಮಾಡಿದರು.