ಅವಹೇಳನಕಾರಿ ಹೇಳಿಕೆ ; ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಂಗ ಬಂಧನ
ಉಡುಪಿ : ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಧರ್ಮಸ್ಥಳ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ತಿಮರೋಡಿ ವಿರುದ್ಧ ಉಡುಪಿಯ ಬ್ರಹ್ಮಾವರ ಠಾಣೆಯಲ್ಲಿ ಬಿ.ಎಲ್ ಸಂತೋಷ ವಿರುದ್ಧ ಅವಹೇಳನಕಾರಿ ಆರೋಪದ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ತಿಮರೋಡಿ ಅವರನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಪ್ರಕರಣ ಕುರಿತು ಜಾಮೀನು ನೀಡುವಂತೆ ತಿಮರೋಡಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಬ್ರಹ್ಮಾವರ ಕೋರ್ಟ್ ಇವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಚಾರಣೆ ಮುಂದೂಡಿದೆ.
ಬಂಧನ ವೇಳೆ ಮಾತನಾಡಿದ್ದ ತಿಮರೋಡಿ ಅವರು, ನನಗೆ ಏನಾದರು ಆದರೆ ಬಿಜೆಪಿ ನೇರ ಕಾರಣ. ಸುಳ್ಳು ಕೇಸ್ ಹಾಕಿ ನನ್ನನ್ನು ಒಳಗೆ ಹಾಕುವ ಕೆಲಸ ನಡೆದಿದ್ದು ಸರಕಾರ ಇದಕ್ಕೆ ಹೊಣೆ ಎಂದು ಆರೋಪಿಸಿದ್ದಾರೆ.


