ಅವಿರೋಧ ಆಯ್ಕೆ ಇಲ್ಲದಿದ್ದರೆ ಚುನಾವಣೆ ಎಚ್ಚರಿಕೆ ; ಸಾಹುಕಾರ್ ನಡೆಯಿಂದ ಸ್ವಪಕ್ಷದಲ್ಲೇ ಹತ್ತಿದ ಕಿಚ್ಚು..!
ಬೆಳಗಾವಿ : ಇನ್ನೂ ಅಕ್ಟೋಬರ್ ನಲ್ಲಿ ನಡೆಯಲಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆ ಕಾವು ಜೋರಾಗತೊಡಗಿದ್ದು ಅಭ್ಯರ್ಥಿ ಆಯ್ಕೆ ವಿಚಾರವಾಗಿ ನಾಯಕರ ನಡುವೆ ಗುದ್ದಾಟ ಪ್ರಾರಂಭವಾಗಿದೆ. ಈ ಕುರಿತು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಹೌದು ಬರುವೆ ಅಕ್ಟೋಬರ್ 19 ರಂದು ಡಿಸಿಸಿ ಬ್ಯಾಂಕ್ ಚುನಾವಣೆ ದಿನಾಂಕ ನಿಗದಿಗೊಳಿಸಲಾಗಿದೆ. ಈ ಕುರಿತು ಗುರುವಾರ ಖಾನಾಪುರದಲ್ಲಿ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಬಾಲಚಂದ್ರ ಜಾರಕಿಹೊಳಿ ಖಡಕ್ ಸಂದೇಶ ರವಾನಿಸಿದ್ದಾರೆ.
ಸಧ್ಯ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಖಾನಾಪುರ ಭಾಗದಿಂದ ಹಾಲಿ ಸದಸ್ಯ ಅರವಿಂದ ಪಾಟೀಲ್ ಅವರನ್ನೇ ಅಭ್ಯರ್ಥಿ ಮಾಡುವ ನಿರ್ಧಾರಕ್ಕೆ ಜಾರಕಿಹೊಳಿ ಬಣ ಬಂದಿದೆ. ಆದರೆ ಖಾನಾಪುರ ಹಾಲಿ ಶಾಸಕ ವಿಠ್ಠಲ ಹಲಗೇಕರ್ ಅವರು ಅರವಿಂದ ಪಾಟೀಲ್ ಅವರನ್ನೇ ಮುಂದುವರಿಸುವ ನಿರ್ಧಾರಕ್ಕೆ ವಿರೋಧ ಹೊಂದಿದ್ದು ಸ್ಪಷ್ಟವಾಗಿದೆ.
ಆದರೆ ಸ್ವ ಪಕ್ಷದ ಶಾಸಕ ವಿಠ್ಠಲ ಹಲಗೇಕರ್ ಅವರ ಮನವೊಲಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಮುಂದಾಗಿದ್ದಾರೆ. ಶತಾಯ ಗತಾಯ ಅರವಿಂದ ಪಾಟೀಲ್ ಅವರನ್ನೇ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದು, ಅವಿರೋಧ ಆಯ್ಕೆಗೆ ವಿರೋಧ ಮಾಡಿದರೆ ಚುನಾವಣೆ ವೇಳೆ ನಾವೆಲ್ಲರೂ ಅರವಿಂದ ಪಾಟೀಲ್ ಬೆಂಬಲಕ್ಕೆ ನಿಲ್ಲುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಖಾನಾಪುರದ ಮಾಜಿ ಶಾಸಕ ಆಗಿರುವ ಹಾಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ್ ಅವರ ಆಯ್ಕೆಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸ್ವತಃ ಹಾಲಿ ಶಾಸಕ ವಿಠ್ಠಲ ಹಲಗೇಕರ್ ಕೂಡಾ ಅನೇಕ ಸಂದರ್ಭಗಳಲ್ಲಿ ಅರವಿಂದ ಪಾಟೀಲ್ ವಿರುದ್ಧ ಅನೇಕರ ಗಮನಸೆಳೆದಿದ್ದಾರೆ. ಆದರೆ ಬಾಲಚಂದ್ರ ಜಾರಕಿಹೊಳಿ ಅವರು ಬಹಿರಂಗವಾಗಿ ಅರವಿಂದ್ ಪಾಟೀಲ ಬೆಂಬಲಕ್ಕೆ ನಿಂತಿದ್ದು ಬಿಜೆಪಿ ವಲಯದಲ್ಲೇ ಸಾಕಷ್ಟು ಏರು ಪೇರು ಆಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.


