ಗೋಕಾಕ್ : 13 ಕೋಟಿ ರು. ವೆಚ್ಚದಲ್ಲಿ ದೇವಸ್ಥಾನ ಜೀರ್ಣೋದ್ಧಾರ ; ಹಿಡಿದ ಕೆಲಸ ಯಶಸ್ವಿಗೊಳಿಸಿದ ಸಾಹುಕಾರ
ಗೋಕಾಕ – ಗೋಕಾವಿ ನಾಡಿನ ಶಕ್ತಿ ದೇವತೆಯಾದ ಶ್ರೀ ಮಹಾಲಕ್ಷ್ಮೀ ದೇವಿಯ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಮಧ್ಯ ಸಡಗರ ಸಂಭ್ರಮದಿಂದ ಬುಧವಾರ ರಾತ್ರಿ ಜರುಗಿತು.
ಏಪ್ರಿಲ್ ೩೦ ರಿಂದ ಆರಂಭಗೊಂಡಿರುವ ಅಷ್ಠ ಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಮಹಾ ರಥೋತ್ಸವ ಕಾರ್ಯಕ್ರಮಕ್ಕೆ ಅಪಾರ ಭಕ್ತರು ಆಗಮಿಸಿ ದೇವಿಯರ ದರ್ಶನ ಪಡೆದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಮುಂದಾಳತ್ವದಲ್ಲಿ ಕಳೆದ ೮ ದಿನಗಳಿಂದ ಅತಿ ವಿಜೃಂಭಣೆಯಿಂದ ದೇವರುಗಳ ಮೂರ್ತಿ ಪ್ರತಿಷ್ಠಾಪನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿ ಗೋಕಾಕ ಇತಿಹಾಸದಲ್ಲಿಯೇ ಹೊಸ ಮೈಲುಗಲ್ಲು ಸಾಧಿಸಿದ್ದು, ನೆರೆದ ಅಪಾರ ಭಕ್ತರಿಗೆ ಧಾರ್ಮಿಕ ವಾತಾವರಣ ಮೂಡಿಸುವಲ್ಲಿ ಈ ಕಾರ್ಯಕ್ರಮಗಳು ಯಶಸ್ವಿಯಾಗಿವೆ.
ಸುಮಾರು ೧೩ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಗಣಪತಿ, ಈಶ್ವರ, ಆಂಜನೇಯ, ನಾಗದೇವ, ನವಗ್ರಹ ದೇವರುಗಳ ಹೊಸ ದೇವಸ್ಥಾನಗಳು ತಲೆ ಎತ್ತಿದ್ದು, ಸಕಲ ಭಕ್ತರಿಗೆ ಒಂದೇ ದೇವಸ್ಥಾನದ ಆವರಣದಲ್ಲಿ ಬಹುತೇಕ ದೇವರುಗಳ ದರ್ಶನ ಭಾಗ್ಯ ಲಭಿಸಿದ್ದು, ಇಡೀ ಭಕ್ತ ಸಮುದಾಯವು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮಾಜ ಮುಖಿ ಕೆಲಸಕ್ಕೆ ಖುಷಿಯಾಗಿದ್ದಾರೆ.
ಬುಧವಾರದಂದು ಮುಂಜಾನೆಯಿಂದ ವಿವಿಧ ಕಾರ್ಯಕ್ರಮಗಳು ಜರುಗಿದ್ದು, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ದಂಪತಿಗಳು ಪೂಜಾ ಕಾರ್ಯಗಳಲ್ಲಿ ಭಾಗಿಯಾಗಿ ದೇವರುಗಳ ಸೇವೆ ಸಲ್ಲಿಸಿದರು. ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮತ್ತವರ ಸಹೋದರ ತಂಡವೆಲ್ಲ ಲಖನ ಜಾರಕಿಹೊಳಿ ಅವರೊಂದಿಗೆ ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಯಲ್ಲಿ ತೇಲಿ ಹೋದರು.
ರಾತ್ರಿ ವೇಳೆ ನಡೆದ ಮಹಾಲಕ್ಷ್ಮೀ ದೇವರ ರಥೋತ್ಸವ ಕಾರ್ಯಕ್ರಮಕ್ಕೆ ಗೋಕಾಕ – ಮೂಡಲಗಿ ತಾಲೂಕು ಸೇರಿದಂತೆ ಜಿಲ್ಲೆಯ ಭಕ್ತರು ಸಾಥ್ ನೀಡಿ ರಥೋತ್ಸವವನ್ನು ಯಶಸ್ವಿಗೊಳಿಸಿದರು.
ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಉಡುಪಿ ಶೈಲಿಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ರಥೋತ್ಸವ ಭಕ್ತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ದೇವಸ್ಥಾನದ ಒಳಗಡೆ ನಡೆದ ರಥೋತ್ಸವವು ವಿವಿಧ ವಾದ್ಯ ಮೇಳಗಳು, ಕುಣಿತ ಭಕ್ತರನ್ನು ಮಂತ್ರ ಮುಗ್ಧರಣ್ಣಗಿಸಿತು. ಮೂರು ಬಾರಿ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ಭವ್ಯವಾಗಿ ರಥೋತ್ಸವ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
ಉಡುಪಿಯ ಹೆಸರಾಂತ ಪಂಡಿತ ಉಚ್ಚಿಲ ಆಚಾರ್ಯರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
———————————
ಮಹಾಲಕ್ಷ್ಮಿ ದೇವಿ ಸೇವೆ ಮಾಡಿರುವ ತೃಪ್ತಿ ಇದೆ :
ಗೋಕಾವಿ ನೆಲದ ಶಕ್ತಿ ಪೀಠವಾಗಿರುವ ಮಹಾಲಕ್ಷ್ಮೀ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಮೂಲಕ ಸುಂದರ ಯಾತ್ರಾ ಸ್ಥಳವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ದೇವಿಯ ಕೆಲಸ ಮಾಡಿದ್ದರ ಬಗ್ಗೆ ಹೆಮ್ಮೆ, ತೃಪ್ತಿ ನನಗಿದೆ. ಗೋಕಾವಿ ನಾಡಿನಲ್ಲಿ ಹುಟ್ಟಿರುವುದಕ್ಕೆ ನನಗೆ ತುಂಬಾ ಖುಷಿಯಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಂತಸವನ್ನು ಹಂಚಿಕೊಂಡರು.
ಬುಧವಾರದಂದು ಮಹಾಲಕ್ಷ್ಮೀ ದೇವಿಯ ರಥೋತ್ಸವಕ್ಕು ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಅಂದಾಜು ೧೩ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭವ್ಯವಾದ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಗೋಕಾಕ ನಗರದ ಕೆಂಚಪ್ಪ ಮತ್ತು ವಿಠ್ಠಲ ಗೌಡರ ಅವರಿಗೆ ಇದನ್ನು ನಿರ್ಮಾಣ ಮಾಡಲು ಗುತ್ತಿಗೆ ನೀಡಲಾಯಿತು. ಇಡೀ ಗೋಕಾಕ ನಾಗರಿಕರು ಮೆಚ್ಚುವ ರೀತಿಯಲ್ಲಿ ಆಕರ್ಷಕವಾಗಿ ದೇವಸ್ಥಾನವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಗೌಡರ ಅವರ ಕಾರ್ಯಕ್ಕೆ ಪ್ರತಿಯೊಬ್ಬರೂ ಭೇಷ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಮಹಾಲಕ್ಷ್ಮೀ ದೇವಸ್ಥಾನವನ್ನು ಐತಿಹಾಸಿಕ ದೇವಾಲಯವಾಗಿ ಮಾರ್ಪಾಡು ಮಾಡುವ ಸೂಚನೆ ನೀಡಿದರು.
ಮಹಾಲಕ್ಷ್ಮೀ ದೇವಸ್ಥಾನಕ್ಕೆ ಬಂದರೆ ಗಣಪತಿ, ಈಶ್ವರ, ಆಂಜನೇಯ, ನಾಗದೇವ, ನವಗ್ರಹ ದೇವರುಗಳ ದರ್ಶನ ಆಗುತ್ತದೆ. ಜೊತೆಗೆ ಐದು ಪೂಜ್ಯನೀಯ ಗಿಡಗಳು ನವಗ್ರಹ ಪಕ್ಕದಲ್ಲಿ ಇದ್ದು ಇದು ಕೂಡ ವಿಶೇಷವಾಗಿದೆ. ಅಶ್ವತ್ಥ್ ಮರ, ಬಿಲ್ವಪತ್ರೆ, ಬನ್ನಿ ಗಿಡ, ಹತ್ತಿ ಮರ, ಬೇವಿನ ಮರಗಳು ತಾವೇ ಎದ್ದು ನಿಂತಿವೆ. ಇಲ್ಲಿ ದರ್ಶನ ಪಡೆದರೆ ನಿಮ್ಮ ಜೀವನವು ಪಾವನವಾಗುತ್ತದೆ. ಕಷ್ಟಗಳು ದೂರವಾಗುತ್ತವೆ. ಸುಖ, ಶಾಂತಿ ಪ್ರಾಪ್ತಿಯಾಗುತ್ತದೆ ಎಂದು ಅವರು ಹೇಳಿದರು. ಕೆ. ವಿ. ರಾಘವೇಂದ್ರ ಉಪಾಧ್ಯಾಯ ಜ್ಯೋತಿಷ್ಯರ ನೇತೃತ್ವದಲ್ಲಿ ಸುಮಾರು ೪೬ ಹೋಮ ಹವನ ಯಜ್ಞ ಯಾಗಾದಿಗಳು ನಡೆದಿವೆ. ಇಂಥ ಪೂಜೆ, ಪುನಸ್ಕಾರಗಳು ಇಲ್ಲಿಯವರೆಗೆ ಯಾರೂ ನೋಡಿಯೇ ಇಲ್ಲ. ಅಂಥ ಪೂಜೆಗಳು ನಮ್ಮಲ್ಲಿ ನಡೆದಿವೆ. ದೇವಿಯ ಆಶೀರ್ವಾದವೇ ಇದಕ್ಕೆಲ್ಲ ಕಾರಣವಾಗಿದೆ ಎಂದು ಹೇಳಿದರು.
ದೇವಸ್ಥಾನವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇಬ್ಬರು ಬ್ರಾಹ್ಮಣ ಅರ್ಚಕರನ್ನು ನೇಮಿಸಿಕೊಂಡು ದೇವಿಯರ ಪೂಜೆಯನ್ನು ಮಾಡುತ್ತಾರೆ. ಪೂಜೆ ಮಾಡುವ ಸಲುವಾಗಿ ಎದ್ದಿರುವ ವಿವಾದಗಳನ್ನು ಈಗಾಗಲೇ ಸರಿಪಡಿಸಲಾಗಿದೆ. ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೊಸ ಅರ್ಚಕನ್ನು ನಿಯೋಜಿಸಲು ಕ್ರಮ ಕೈಗೊಂಡಿರುವದಾಗಿ ಅವರು ಅರ್ಚಕರ ವಿವಾದಕ್ಕೆ ತೆರೆ ಎಳೆದರು.
ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾ ಸ್ವಾಮಿಗಳು, ಉಡುಪಿ ಪಂಡಿತ ಕೆ ವಿ ರಾಘವೇಂದ್ರ ಉಪಾಧ್ಯಾಯರು,ರಾಚೋಟೇಶ್ವರ ಶ್ರೀಗಳು, ಬಟಕುರ್ಕಿಯ ಶ್ರೀಗಳು, ಕಪರಟ್ಟಿ ಬಸವರಾಜ್ ಹಿರೇಮಠ ಶ್ರೀಗಳು, ರಾಜ್ಯ
ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಅಮರ ಜಾರಕಿಹೊಳಿ, ಸನತ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಅಭಿಷೇಕ ನಾಯಿಕ, ಮುಖಂಡ ಅಶೋಕ ಪೂಜಾರಿ,ಖ್ಯಾತ ಉದ್ಯಮಿ ಜೇ. ಎನ್. ಶೆಟ್ಟಿ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ವಿಕ್ರಮ ಅಂಗಡಿ, ಬಸವರಾಜ್ ಕಲ್ಯಾಣಶೆಟ್ಟಿ, ಜಾತ್ರಾ ಮಹೋತ್ಸವ ಸಮಿತಿಯ ಪ್ರಭಾಕರ್ ಚವ್ಹಾಣ್ ಅಡಿವೆಪ್ಪ ಕಿತ್ತೂರ, ಅಶೋಕ ಹೆಗ್ಗನ್ನವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
*********
ಕೋಟ್ :::::::
ಪ್ರತಿ ದಿನವೂ ಹೋಮ, ಹವನ ಯಜ್ಞಗಳನ್ನು ಮಾಡುವ ಸಂದರ್ಭದಲ್ಲಿ ಉಡುಪಿ ರಾಘವೇಂದ್ರ ಉಪಾಧ್ಯಾಯ ಜ್ಯೋತಿಷ್ಯರು ಗೋಕಾಕ ಜಿಲ್ಲೆಯೆಂದೇ ಹೇಳುತ್ತಿದ್ದರು. ಅವರ ಬಾಯಿಂದ ನಮ್ಮ ಗೋಕಾಕ ಜಿಲ್ಲೆಯೆಂದು ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗೋಕಾಕ ಜಿಲ್ಲೆಯಾಗಿ ಘೋಷಣೆಯಾಗಲಿದೆ.
ಬಾಲಚಂದ್ರ ಜಾರಕಿಹೊಳಿ
ಶಾಸಕರು ಅರಭಾವಿ
*******


