ಯುದ್ಧದ ಕಾರ್ಮೋಡ ; ರಾಜ್ಯದ ಮೂರು ನಗರದಲ್ಲಿ ಮೊಳಗಲಿದೆ ಸೈರನ್
ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮುಂದುವರಿದಿದ್ದು ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಲಿದೆ ಎಂಬ ಮಾತು ಜೋರಾಗಿವೆ. ಈ ನಡುವೆ ದೇಶದ 259 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ( mock drill india ) ಗೆ ಸಿದ್ಧತೆ ನಡೆಯುತ್ತಿದೆ.
ಮಾಕ್ ಡ್ರಿಲ್ ಎಂದರೆ ಇದೊಂದು ರೀತಿಯಲ್ಲಿ ಶತ್ರು ರಾಷ್ಟ್ರಗಳು ನಡೆಸುವ ದಾಳಿಯಿಂದ ನಮ್ಮ ಪ್ರಮುಖ ಪ್ರದೇಶಗಳನ್ನು ಉಳಿಸಿಕೊಳ್ಳುವ ಹಾಗೂ ನಾಗರಿಕರ ರಕ್ಷಣೆ ಕುರಿತಾಗಿ ಮಾಡುವ ಅಣಕು ಪ್ರದರ್ಶನ ಎಂದರ್ಥ. ಮಾಕ್ ಡ್ರಿಲ್ ಸಂದರ್ಭದಲ್ಲಿ ಸೈರನ್ ಮೊಳಗಲಿದೆ.
ರಾಜ್ಯದಲ್ಲಿ ಮೂರು ಪ್ರದೇಶಗಳಲ್ಲಿ ಮಾಕ್ ಡ್ರಿಲ್ ನಡೆಯಲಿದ್ದು, ಬೆಂಗಳೂರು, ರಾಯಚೂರು ಹಾಗೂ ಕಾರವಾರದಲ್ಲಿ ಸೈರನ್ ಮೊಳಗಲಿದೆ. ಬೆಂಗಳೂರಿನ 35 ಪ್ರದೇಶಗಳಲ್ಲಿ ಈ ಸೈರನ್ ಕೇಳಿಬರಲಿದೆ.
ರಾಯಚೂರಿನಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಇದೆ. ಇನ್ನೂ ಕಾರವಾರದಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರ ಇದ್ದು ಬೆಂಗಳೂರಿನ ಜೊತೆ ಈ ಎರಡೂ ನಗರದಲ್ಲಿ ಮಾಕ್ ಡ್ರಿಲ್ ಮಾಡಲಾಗುತ್ತದೆ ಎಂದು ಸಿವಿಲ್ ಡಿಫೆನ್ಸ್ ಮುಖ್ಯಸ್ಥ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.


