Select Page

Advertisement

ಕುರಿಗಾಯಿ ಯುವಕ UPSC ತೇರ್ಗಡೆ ; ಬೀರಪ್ಪನ ಸಾಧನೆ ಕೊಂಡಾಡಿದ ಕುಟುಂಬ

ಕುರಿಗಾಯಿ ಯುವಕ UPSC ತೇರ್ಗಡೆ ; ಬೀರಪ್ಪನ ಸಾಧನೆ ಕೊಂಡಾಡಿದ ಕುಟುಂಬ

ಬೆಳಗಾವಿ : ಹುಟ್ಟಿದ್ದು ಬಡ ಕುಟುಂಬದಲ್ಲಿ. ಕುರಿ ಮೇಯಿಸುತ್ತ ಬದುಕಿನ ಬಂಡಿ ಸಾಗಿಸುತ್ತಿದ್ದ ಕುಟುಂಬದ ಕುಡಿ ಈಗ ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆ ತೇರ್ಗಡೆಯಾಗುವ ಮೂಲಕ ಸಾಧನೆ ಮೆಟ್ಟಿಲು ಏರುವಲ್ಲಿ ಯಶಸ್ವಿಯಾಗಿದ್ದಾನೆ.

ಹೌದು ಮೂಲತಃ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಎಮಗೆ ಗ್ರಾಮದ ಯುವಕ ಬೀರಪ್ಪ ಸಿದ್ದಪ್ಪ ಡೋಣಿ ಸಧ್ಯ ಯುಪಿಎಸ್ಸಿ ಪರೀಕ್ಷೆ ತೇರ್ಗಡೆಯಾಗಿದ್ದು ದೇಶಕ್ಕೆ 551 ನೇ ರ್ಯಾಂಕ್ ಪಡೆಯುವ ಮೂಲಕ ಮಹತ್ವದ ಸಾಧನೆಗೈದಿದ್ದಾರೆ. ಕುರಿ ಸಾಕಾಣಿಕೆಯೇ ಇವರ ಕುಟುಂಬದ ಮೂಲವಾದರು ಬಡತನದ ಮಧ್ಯೆ ಸತತ ಪರಿಶ್ರಮದಿಂದ ಬೀರಪ್ಪ ಮಹತ್ವದ ಸಾಧನೆ ಮಾಡುವಲ್ಲಿ ಯಶಸ್ವಿಗಿದ್ದಾರೆ.

ಬೀರಪ್ಪ ಅವರ ತಂದೆ ಸಿದ್ದಪ್ಪ ಅವರಿಗೆ ಮೂರು ಮಕ್ಕಳು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಕನಸು ಹೊತ್ತವರು. ಆದರೆ ಕನಸು ನನಸಾಗದ ಕಾರಣ ಬಡತನದಲ್ಲಿ ಕುರಿ ಮೇಯಿಸುತ್ತ ತಮ್ಮ ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದವರು. ಇವರ ಮೂರನೇ ಮಗ ಬೀರಪ್ಪ ಸಧ್ಯ ಯುಪಿಎಸ್ಸಿ ಪರೀಕ್ಷೆ ತೇರ್ಗಡೆಯಾಗುವ ಮೂಲಕ ತಂದೆಯ ಕನಸು ನನಸಾಗಿಸಿದ್ದಾರೆ.

ಸಿದ್ದಪ್ಪ ಹಾಗೂ ಬಾಳವ್ವ ದಂಪತಿಯ ಮೂರನೇ ಮಗನಾಗಿ ಜನಿಸಿದ ಬೀರಪ್ಪ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣವನ್ನು ತನ್ನೂರು ಎಮಗೆಯಲ್ಲಿ ಮುಗಿಸಿ ನಂತರ ಪಿಯು ಶಿಕ್ಷಣವನ್ನು ವಿಜ್ಞಾನ ವಿಭಾಗದಲ್ಲಿ ಮುಗಿಸಿ ನಂತರ ಬಿಟೆಕ್ ಪದವಿ ಪಡೆದಿದ್ದಾರೆ. ಅಲ್ಲದೆ ಈತನ ಪ್ರತಿಭೆಗೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪೋಸ್ಟ್ ಆಫೀಸ್ ನಲ್ಲಿ ಕೆಲಸ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಪೋಸ್ಟ್ ಆಫೀಸ್ ಕೆಲಸಕ್ಕೆ ತೃಪ್ತಿ ಹೊಂದದ ಬೀರಪ್ಪ ಅದಕ್ಕೆ ರಾಜೀನಾಮೆ ನೀಡಿ 2021 ರಿಂದ ಓದಲು ಪ್ರಾರಂಭ ಮಾಡಿದ್ದ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಆಗಲೇಬೇಕು ಎಂದು ಹಠ ಹಿಡಿದು ಛಲದಂಕಮಲ್ಲನ ರೀತಿ ತಯಾರಿ‌ ನಡೆಸಿ ಕಡೆಗೆ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ದೇಶಕ್ಕೆ 551 ನೇ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಧ್ಯ ಯುಪಿಎಸ್ಸಿಯಲ್ಲಿ ಮೂರನೇ ಪ್ರಯತ್ನಕ್ಕೆ ತೇರ್ಗಡೆ ಹೊಂದಿರುವ ಬೀರಪ್ಪ ಮೊದಲ ಪ್ರಯತ್ನದಲ್ಲಿ ಮೂವತ್ತು ಹಾಗೂ ಎರಡನೇ ಪ್ರಯತ್ನದಲ್ಲಿ ಕೇವಲ ಮೂರು ಅಂಕದಲ್ಲಿ ಹಿಂದೆ ಬಿದ್ದಿದ್ದರು. ಆದರೆ ಛಲವನ್ನು ಬಿಡದೆ ಎಡಬಿಡದೆ ಓದಿ ಸಧ್ಯ ಪ್ಲಿಲಿಮಿನರಿ ಹಾಗೂ ಮೇನ್ಸ್ ಎಕ್ಸಾಂ ಪಾಸ್ ಆಗಿ ಸಧ್ಯ ಇಂಟರ್ವ್ಯೂ ನಲ್ಲೂ ಪಾಸಾಗಿದ್ದಾನೆ.

ಇನ್ನು ಬೀರಪ್ಪನ ಈ ಸಾಧನೆಗೆ ಸಿಎಂ ಸಿದ್ದರಾಮಯ್ಯ ಸಹ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಜನರಿಗೆ ಉತ್ತಮ ಆಡಳಿತ ನೀಡಬೇಕು ಎನ್ನುವ ಕನಸನ್ನು ಬೀರಪ್ಪ ಹೊಂದಿದ್ದು ತಾನೊಬ್ಬ ಐಪಿಎಸ್ ಆಫೀಸರ್ ಆಗಬೇಕು ಎಂಬ ಕಸನು ಹೊಂದಿದ್ದಾರೆ. ಒಟ್ಟಿನಲ್ಲಿ ಕುರಿ ಮೇಯಿಸುವ ಯುವಕ ಇಂದು ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಸಾಧನೆ ಶಿಕರ ಏರಿದ್ದು ವಿಶೇಷ.

Advertisement

Leave a reply

Your email address will not be published. Required fields are marked *

error: Content is protected !!