ಅಥಣಿಯ ಕೊಡುಗೈ ದಾನಿ ಡಾ. ಸಂಪತ್ ಕುಮಾರ ಶಿವಣಗಿ ನಿಧನ
ಅಥಣಿ : ಪಟ್ಟಣದ ನಿವಾಸಿಯಾಗಿ 50 ವರ್ಷಗಳಿಂದ ಅಮೆರಿಕಾದಲ್ಲಿ ವಾಸವಾಗಿರುವ ಪ್ರಸಿದ್ದ ಮನೋವೈದ್ಯ ಡಾ.ಸಂಪತ್ ಕುಮಾರ ಸಿದ್ರಾಮಪ್ಪ ಶಿವಣಗಿ(84) ಅವರು ಅಮೇರಿಕಾದಲ್ಲಿ ಮಂಗಳವಾರ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಅಮೇರಿಕಾದ ಮಿಷಿಸಿಪಿಯಲ್ಲಿ ಜರುಗಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಅಥಣಿ ಪಟ್ಟಣದ ಶಿವಣಗಿ ಮನೆತನದಲ್ಲಿ ಜನಿಸಿದ ಡಾ. ಸಂಪತ್ ಕುಮಾರ ಹುಟ್ಟೂರಿನಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿ ಬೆಳಗಾವಿಯ ಕೆಎಲ್ಇ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಪೂರೈಸಿದ ಇವರು ಕಳೆದ 50 ವರ್ಷಗಳಿಂದ ಅಮೆರಿಕಾದ ಮಿಸಿಸಿಪಿಯಲ್ಲಿ ಮನು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಡಾ.ಸಂಪತ್ತಕುಮಾರ ಶಿವಣಗಿ ಅವರು ಭಾರತೀಯ ಮೂಲದ ಅಮೇರಿಕನ್ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಆರಿಜಿನ್‌ನಲ್ಲಿ ಕಾರ್ಯದರ್ಶಿ, ಉಪಾಧ್ಯಕ್ಷ ಮತ್ತು ಎಎಪಿಐ ಮಿಸ್ಸಿಸ್ಸಿಪ್ಪಿಯ ಸ್ಥಾಪಕ ಅಧ್ಯಕ್ಷರಾಗಿ ಮತ್ತು ಶ್ವೇತಭವನದಲ್ಲಿ ನೇಮಕಗೊಂಡಾಗ ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.
ವೈದ್ಯಕೀಯ ಹಾಗೂ ಅನೇಕ ಸಾಮಾಜಿಕ ಸೇವೆಗಳನ್ನು ಗುರುತಿಸಿ ಅವರಿಗೆ ಅಮೆರಿಕ ಮತ್ತು ಭಾರತ ಸರ್ಕಾರ ಹಾಗೂ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸುವೆ.
ಅವರು ಅಮೇರಿಕಾದ ಅನೇಕ ಸಂಘ ಸಂಸ್ಥೆಗಳಿಗೆ ಸಹಾಯ ಸಹಕಾರ ನೀಡುವುದರ ಜೊತೆಗೆ ಭಾರತ ದೇಶಕ್ಕೆ ಕೂಡಾ ವಿಶೇಷ ಕೊಡುಗೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದ ಇವರು ಇತ್ತೀಚಿಗೆ ಬೆಳಗಾವಿ ಕೆಎಲ್‌ಇ ಸಂಸ್ಥೆಯ ಕಾನ್ಸರ ಆಸ್ಪತ್ರೆಗೆ 8 ಕೋಟಿ ದಾನ ನೀಡಿದ್ದಾರೆ.
ಈ ಆಸ್ಪತ್ರೆಯನ್ನು ಇತ್ತೀಚಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಾರ್ಪಣೆ ಮಾಡಿರುವುದನ್ನು ಸ್ಮರಿಸಬಹುದು. ಇದಲ್ಲದೆ ಅಥಣಿ ಪಟ್ಟಣದ ಪ್ರತಿಷ್ಠಿತ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗೆ ಒಂದು ಕೋಟಿ ರೂಪಾಯಿ ದಾನ ನೀಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಸಹಾಯಧನ ನೀಡಿ ತಾಯಿನಾಡಿನ ಋಣ ತೀರಿಸುವ ಪ್ರಯತ್ನ ಮಾಡಿದರು.
ಗಣ್ಯರ ಸಂತಾಪ : ಡಾ. ಸಂಪತ್ ಕುಮಾರ್ ಶಿವಣಗಿ ಅವರ ನಿಧನಕ್ಕೆ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ, ಶಾಸಕ ಲಕ್ಷ್ಮಣ ಸವದಿ, ಮಾಜಿ ಶಾಸಕರಾದ ಶಹಜಾನ ಡೊoಗರಗಾoವ, ಮಹೇಶ ಕುಮಠಳ್ಳಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.


